ಮಂಜೇಶ್ವರ ಕುಂಡುಕೊಳಕೆ ಸಮುದ್ರಕ್ಕೆ ನಿನ್ನೆ ಹಾರಿದ ದಂಪತಿಗಳ ಪೈಕಿ ಭಾಸ್ಕರ್ ನೀರೋಲ್ಪೆ (60) ಮೃತದೇಹ ಉಪ್ಪಳ ಮುಸೋಡಿ ಅಧಿಕ ಸಮುದ್ರದಲ್ಲಿ ಇಂದು ಮಧ್ಯಾಹ್ನ ಪತ್ತೆ. ಬದುಕುಳಿದ ಪತ್ನಿ ಮಾಲತಿಯವರ ಚಿಕಿತ್ಸೆ ಮುಂದುವರಿಕೆ.
ಫೆಬ್ರವರಿ 23, 2025
0
ಸಮುದ್ರಕ್ಕೆ ಹಾರಿದ ದಂಪತಿಗಳ ಪೈಕಿ ಪತಿಯ ಮೃತದೇಹ ಉಪ್ಪಳ ಮುಸೋಡಿ ಅಧಿಕ ಸಮುದ್ರದಲ್ಲಿ ಪತ್ತೆ. ಬದುಕುಳಿದ ಪತ್ನಿಯ ಚಿಕಿತ್ಸೆ ಮುಂದುವರಿಕೆ.
ಮಂಜೇಶ್ವರ: ದಂಪತಿಗಳಿಬ್ಬರೂ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈಯಲು ಯತ್ನಿಸಿದ ಘಟನೆಯಲ್ಲಿ ಸಮುದ್ರ ಪಾಲಾಗಿದ್ದ ಪತಿ
ಮೀಂಜ ಗ್ರಾಮ ಪಂಚಾಯತ್ ಗೊಳಪಟ್ಟ ಕಡಂಬಾರು ನೀರೋಲ್ಪೆ ನಿವಾಸಿ, ಹೊಸಂಗಡಿ ಎಸ್. ಎ ಟೈಲರ್ ಮಾಲಕ ಭಾಸ್ಕರ್ ನೀರೋಲ್ಪೆ (60) ಯವರ ಮೃತದೇಹ ಇಂದು ಅಪರಾಹ್ನ 3.00 ಗಂಟೆ ವೇಳೆ ಉಪ್ಪಳ ಮುಸೋಡಿ ಅಧಿಕದ ಸಮುದ್ರದಲ್ಲಿ ಪತ್ತೆಯಾಗಿದೆ. ಬೆಳಗ್ಗಿನಿಂದಲೇ ಹುಡುಕಾಟವಾಡುತ್ತಿದ್ದ ಪೋಲಿಸರು ಮೃತದೇಹವನ್ನು ಪತ್ತೆ ಹಚ್ಚಿ, ಬೋಟ್ ನ ಮೂಲಕ ದಡಕ್ಕೆ ತಂದು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ನಡುವೆ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ನಿ ಮಾಲತಿಯವರ ಚಿಕಿತ್ಸೆ ಮುಂದುವರಿಯುತ್ತಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಕಡಂಬಾರು ನೀರೋಲ್ಪೆ ನಿವಾಸಿ ದಿ. ಅಮ್ಮು ಮೂಲ್ಯ - ದಿ. ಕಾವೇರಿ ದಂಪತಿ ಪುತ್ರನಾಗಿರುವ ಭಾಸ್ಕರ್ ನೀರೋಲ್ಪೆ ಹೊಸಂಗಡಿ ಬದ್ರಿಯಾ ಕಾಂಪ್ಲೆಕ್ಸ್ ನಲ್ಲಿ ಹಲವು ವರ್ಷಗಳಿಂದ "ಎಸ್. ಎ ಟೈಲರ್" ಎಂಬ ಅಂಗಡಿಯನ್ನ ನಡೆಸುತ್ತಾ ಹೊಸಂಗಡಿ ಜನತೆಗೆ ಚಿರಪರಿಚಿತರಾಗಿದ್ದರು.
ಧಾರ್ಮಿಕ ಕಾರ್ಯಗಳಲ್ಲಿ ಸಕ್ರೀಯರಾಗಿದ್ದ ಭಾಸ್ಕರ್ ರವರು ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಎರಡು ವರ್ಷಗಳ ಹಿಂದೆ ನಡೆದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವೇಳೆ ಸಕ್ರೀಯರಾಗಿ ಹಗಲು - ರಾತ್ರಿ ಕರಸೇವೆಯಲ್ಲೂ, ಕ್ಷೇತ್ರದ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಸೇವೆ ಸಲ್ಲಿಸುವ ಭಕ್ತರಾಗಿದ್ದರು. ಅಲ್ಲದೆ ಕ್ಷೇತ್ರದ ಆಡಳಿತ ಸಮಿತಿ ಸದಸ್ಯ ಹಾಗೂ ಕ್ಷೇತ್ರದ ಅಂಗ ಸಂಸ್ಥೆಯಾದ ಸೇವಾ ಸ್ಫೂರ್ತಿಯ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ, ಸುಪುತ್ರ: ಕಿರಣ್ (ತುಳು ಸಿನಿಮಾ ರಂಗ ಕಲಾವಿದ), ಸಹೋದರರಾದ: ನಾರಾಯಣ ಡ್ರೈವರ್ ಮುರತ್ತನೆ, ಬಾಬು ಕೊಡ್ಡೆ ಮಜಿಬೈಲು, ರಮೇಶ್ ಮಜಿಬೈಲು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಸಹೋದರಿಯರಾದ: ಯಮುನಾ, ಶಾರದಾ, ಲೀಲಾ ಈ ಹಿಂದೆ ನಿಧನರಾಗಿದ್ದಾರೆ. ದಂಪತಿಗಳಿಬ್ಬರು ಸಮುದ್ರಕ್ಕೆ ಹಾರಲು ಕಾರಣವೇನೆಂದು ತಿಳಿದುಬಂದಿಲ್ಲ. ಪ್ರಕರಣ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೃತಪಟ್ಟ ಭಾಸ್ಕರ್ ನೀರೋಲ್ಪೆಯವರ ನಿಧನಕ್ಕೆ ಕಡಂಬಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಸಮಿತಿ, ಮಹಿಳಾ ಮಂಡಳಿ, ಸೇವಾ ಸ್ಫೂರ್ತಿ, ಗರುಡ ಫ್ರೆಂಡ್ಸ್, ಕಜೆಕೋಡಿ ಫ್ರೆಂಡ್ಸ್ ಗಾಢವಾದ ಸಂತಾಪ ಸೂಚಿಸಿದ್ದಾರೆ.


