ಉಪ್ಪಳ/ಪುತ್ತೂರು: ಯಕ್ಷಗಾನದ ಹಾಡಿಗೆ ಕೃತಕ ಬುದ್ಧಿಮತ್ತೆ ಬಳಕೆ ಮಾಡಿರುವುದಾಗಿ ಆರೋಪವನ್ನು ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಲ್ಪಾಡಿ ಗ್ರಾಮ ಪಂಚಾಯತ್ ಗೋಳಪಟ್ಟ ಉಪ್ಪಳ ಬಳಿಯ ಪ್ರತಾಪ ನಗರ ಪುಳಿಕುತ್ತಿ ನಿವಾಸಿ, ಲಕುಮಿ ಸ್ಟುಡಿಯೋ ಮಾಲೀಕ ನಾಗಾರ್ಜುನ್ ಮಂಗಲ್ಪಾಡಿಯವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.
ತನಿಖಾಧಿಕಾರಿಯ ಮುಂದೆ ಹಾಜರಾದ ನಾಗಾರ್ಜುನ್, "ಪೊಲೀಸರು ಕೇಳಿಸಿದ ಯಕ್ಷಗಾನ ಹಾಡಿಗೆ ನಾನು ಸಂಗೀತ ನೀಡಿಲ್ಲ. ಸುಮಾರು ಐದು ವರ್ಷಗಳ ಹಿಂದೆ ಇದೇ ಮಾದರಿಯ ಹಾಡೊಂದನ್ನು ನಾನು ರಚಿಸಿದ್ದೆ, ಆದರೆ ಪ್ರಸ್ತುತ ಪ್ರಕರಣದಲ್ಲಿರುವ ಹಾಡನ್ನು ನಾನು ಮಾಡಿಲ್ಲ. ನನ್ನ ತಾಂತ್ರಿಕ ಅನುಭವದ ಪ್ರಕಾರ, ಇದು ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಲಾದ ಹಾಡು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ," ಎಂದು ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ನೋಟಿಸ್ ಜಾರಿಯಾದ ನಂತರ ತನಿಖೆಗೆ ಸಹಕರಿಸಿರುವ ಅವರು, ತಾನು ಸಂಗೀತ ಸಂಯೋಜಿಸಿದ ಬಗ್ಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.
