ವರ್ಕಾಡಿಯಲ್ಲಿ ಭೂಕುಸಿತ ಭೀತಿ - ಆರು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ.
ಆಗಸ್ಟ್ 03, 2024
0
ವರ್ಕಾಡಿಯಲ್ಲಿ ಭೂಕುಸಿತ ಭೀತಿ - ಆರು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ.
ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತ್ ನ 10 ನೇ ವಾರ್ಡ್ ಬೋರ್ಕಳ ಗೊಳಪಡುವ ಕತ್ತರಿಕೋಡಿಯಲ್ಲಿ ಧಾರಾಕಾರ ಮಳೆ ಕಾರಣದಿಂದ ಭೂಕುಸಿತ ಉಂಟಾಗಿದ್ದು, ಹೆಚ್ಚಿನ ಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಆರು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭೂಕುಸಿತದಿಂದ ಕತ್ತರಿಕೋಡಿ ಹರಿಶ್ಚಂದ್ರ ನಾಯ್ಕರ ಹಳೆಯ ಮನೆ ಹಾಗೂ ನಿರ್ಮಾಣ ಹಂತದಲ್ಲಿರುವ ಮನೆಯ ತಳಪಾಯ ಸಮೇತ ಪೂರ್ಣವಾಗಿ ಹಾನಿಗೀಡಾಗಿದೆ. ಪ್ರಸನ್ನ ನಾಯ್ಕರ ಮನೆ ಸಮೀಪವೂ ಗುಡ್ಢ ವಿಪರೀತವಾಗಿ ಜರಿದು ಬಿದ್ದಿದೆ. ಈ ಸ್ಥಳದಲ್ಲಿ ವಾಸ್ತವ್ಯ ಅಪಾಯಕಾರಿ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಪರಿಸರದಲ್ಲಿರುವ ಆರು ಕುಟುಂಬಗಳಿಗೆ ಆಹಾರ ವಸ್ತುಗಳನ್ನು ನೀಡಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ರಾತ್ರಿ ವೇಳೆ ಈ ಮಾರ್ಗವಾಗಿ ಸಂಚಾರ ನಿಯಂತ್ರಣ ಹೇರಲಾಗಿದೆ. ಸ್ಥಳಕ್ಕೆ ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಭಾರತಿ ಎಸ್, ಸದಸ್ಯರಾದ ಉಮ್ಮರ್ ಬೋರ್ಕಳ, ಪಂಚಾಯತ್ ಕಾರ್ಯದರ್ಶಿ ಅನಿಲ್ ಕುಮಾರ್, ಟ್ರೈಬಲ್ ವಿಸ್ತರಣಾಧಿಕಾರಿ ಶ್ರೀಮತಿ ವೀಣಾ, ಕೊಡ್ಲಮೊಗರು ಗ್ರಾಮಾಧಿಕಾರಿ ಕಿರಣ್ ಶೆಟ್ಟಿ, ಇಂಜಿನಿಯರ್ ಶ್ರೀಮತಿ ಅಖಿಲಾ, ಪ್ರದೀಪ್ ಕುಮಾರ್ ಮುಂತಾದವರು ಭೇಟಿ ನೀಡಿದರು.









