ಕಲಾವಿದರನ್ನು ಪೋಷಿಸುವುದು ಸಮಾಜದ ಕರ್ತವ್ಯ - ಉಮೇಶ್ ಎಂ. ಸಾಲಿಯನ್.
ಜುಲೈ 30, 2024
0
ಕಲಾವಿದರನ್ನು ಪೋಷಿಸುವುದು ಸಮಾಜದ ಕರ್ತವ್ಯ - ಉಮೇಶ್ ಎಂ. ಸಾಲಿಯನ್.
ಮಂಜೇಶ್ವರ: ಒಬ್ಬ ಕಲಾವಿದ ನಿರಂತರ ಕಲಾ ಪ್ರದರ್ಶನಗಳನ್ನು ನೀಡುತ್ತಾ, ತನ್ನ ಶಾರೀರಿಕ ಸಾಮರ್ಥ್ಯವನ್ನು ಮರೆತುಬಿಡುತ್ತಾನೆ. ಶರೀರವು ಕ್ಷೀಣಿಸಿದಾಗ ಪ್ರತಿಭೆಯು ಕುಗ್ಗುತ್ತದೆ, ಮಾತ್ರವಲ್ಲ ತನ್ನ ಕಲಾ ಸೇವೆಯಿಂದ ದೂರ ಸರಿಯುತ್ತಾನೆ. ಕಲೆಯನ್ನು ಪ್ರೋತ್ಸಾಹಿಸುವುದರೊಂದಿಗೆ ಕಲಾವಿದರನ್ನೂ ಪೋಷಿಸುವುದು ನಮ್ಮ ಸಮಾಜದ ಕರ್ತವ್ಯ ಎಂದು, ಸವಾಕ್ ಕಾಸರಗೋಡು ಜಿಲ್ಲಾಧ್ಯಕ್ಷರಾದ ಉಮೇಶ್ ಎಂ ಸಾಲಿಯನ್ ಅಭಿಪ್ರಾಯಪಟ್ಟರು. ಅವರು ಮಂಜೇಶ್ವರದ ಕಲಾಸ್ಪರ್ಶಂ ಅಡಿಟೋರಿಯಂನಲ್ಲಿ ಸವಾಕ್ ಮಂಜೇಶ್ವರ ವಲಯದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರಾದ ಜಯರಾಮ ಮಂಜೇಶ್ವರ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜೀನ್ ಲವೀನಾ ಮೊಂತೇರೊ ವಹಿಸಿದರು. ಅವರು ಮಾತನಾಡಿ.. ತಾನು ಶ್ರೇಷ್ಠ ಕಲಾವಿದ ಅಲ್ಲದಿದ್ದರೂ ಇಂದಿನ ಯುವ ಕಲಾವಿದರಿಗೆ ತನ್ನಿಂದ ಸಾಧ್ಯವಾದಷ್ಟು ಪ್ರೋತ್ಸಾಹ ನೀಡುತ್ತೇನೆ ಎಂದು ನುಡಿದರು. ಚಂದ್ರಹಾಸ್ ಕಯ್ಯಾರು ಲೆಕ್ಕಪತ್ರ ಮಂಡನೆ ಹಾಗೂ ವರದಿ ವಾಚನಗೈದರು. ಜಯಶ್ರೀ ಮೊಂತೇರೊ ಸ್ವಾಗತಿಸಿ, ನೂತನ್ ಚಕ್ರವರ್ತಿ ಧನ್ಯವಾದವಿತ್ತರು. ರಾಧಾಕೃಷ್ಣ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಅಧ್ಯಕ್ಷರಾಗಿ ಜೀನ್ ಲವೀನ ಮೊಂತೇರೊ, ಕಾರ್ಯದರ್ಶಿಯಾಗಿ ನೂತನ್ ಚಕ್ರವರ್ತಿ, ಕೋಶಾಧಿಕಾರಿಯಾಗಿ ಜಯಶ್ರೀ ಮೊಂತೇರೊ ಅಧಿಕಾರ ಸ್ವೀಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಣಿತ ಭಜನೆ, ಗಾನ ನೃತ್ಯ ವೈಭವ ನಡೆಯಿತು. ನುರಿತ ಕಲಾವಿದರಿಂದ ಚಿತ್ರಕಲಾ ಪ್ರದರ್ಶನ ಈ ವೇಳೆ ನಡೆಯಿತು.




