ಕೋಳ್ಯೂರು ಶ್ರೀ ಶಂಕರ ನಾರಾಯಣ ದೇವಸ್ಥಾನದಲ್ಲಿ ಕಳವು. 9 ಪವನ್ ನ ಬೆಳ್ಳಿ ಚಿನ್ನಾಭರಣಗಳನ್ನು ದೋಚಿದ ಕಳ್ಳರು.
ಜುಲೈ 27, 2024
0
ಕೋಳ್ಯೂರು ಶ್ರೀ ಶಂಕರ ನಾರಾಯಣ ದೇವಸ್ಥಾನದಲ್ಲಿ ಕಳವು. 9 ಪವನ್ ನ ಬೆಳ್ಳಿ ಚಿನ್ನಾಭರಣಗಳನ್ನು ದೋಚಿದ ಕಳ್ಳರು.
ಮಂಜೇಶ್ವರ: ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರವೆಂದೇ ಹೆಸರುವಾಸಿಯಾದ ಕೋಳ್ಯೂರು ಶ್ರೀ ಶಂಕರ ನಾರಾಯಣ ದೇವಸ್ಥಾನಕ್ಕೆ ಕಳ್ಳರು ನುಗ್ಗಿ 9 ಪವನ್ ಬೆಳ್ಳಿ ಚಿನ್ನಾಭರಣಗಳನ್ನು ದೋಚಿದ್ದಾರೆ. ಸ್ಥಳದಲ್ಲಿ ಇದೀಗ ಮಂಜೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕೇರಳ ಮಲಬಾರ್ ದೇವಸ್ವಮ್ ಬೋರ್ಡ್ ಗೊಳಪಟ್ಟ ಕೋಳ್ಯೂರು ಶ್ರೀ ಶಂಕರ ನಾರಾಯಣ ದೇವಸ್ಥಾನವು ಮೀಂಜ ಗ್ರಾಮ ಪಂಚಾಯತ್ ನ 2 ನೇ ವಾರ್ಡ್ ನಲ್ಲಿದೆ. ನಿನ್ನೆ ರಾತ್ರಿ ಪೂಜೆಯ ಬಳಿಕ ಕ್ಷೇತ್ರದ ಗರ್ಭಗುಡಿಯ ಬಾಗಿಲು ಹಾಕಿ ತೆರಳಿದ ಅರ್ಚಕರು ಇಂದು ಬೆಳಗ್ಗೆ 5.45 ಕ್ಕೆ ಆಗಮಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಕ್ಷೇತ್ರದ ಹೊರಗಿನ ಸುತ್ತು ಬಾಗಿಲುಗಳೆಲ್ಲಾ ಭದ್ರವಾಗಿದ್ದು, ಕಳ್ಳರು ಹೊರಗಿನ ಸುತ್ತು ಸೀಟ್ ಗೆ ಹತ್ತಿ ಸುತ್ತು ಗೋಪುರದ ಮೂಲಕ ಒಳ ನುಗ್ಗಿರಬೇಕೆಂದು ಸಂಶಯಿಸಲಾಗಿದೆ. ಒಳ ನುಗ್ಗಿದ ಕಳ್ಳರು ಗರ್ಭಗುಡಿಯ ಬಾಗಿಲು ಮುರಿದು, ದೇವರ ಪೀಠದ ಬಳಿ ಇರುವ ಬೆಳ್ಳಿಯ ಸಣ್ಣ ಕೊಡಪಾನದಲ್ಲಿದ್ದ ಬೆಳ್ಳಿ ಚಿನ್ನಾಭರಣಗಳು ಹಾಗೂ ಹೊರಗಿನ ಗಣಪತಿ ಗುಡಿಯಲ್ಲಿದ್ದ ಬೆಳ್ಳಿಯ ಆಭರಣಗಳನ್ನು ಕಳವುಗೈದಿದ್ದಾರೆ. ಕಳವು ನಡೆದ ಬಗ್ಗೆ ಅರ್ಚಕರು ಕ್ಷೇತ್ರದ ಮೆನೇಜರ್ ಗೆ ತಿಳಿಸಿದ್ದು, ಬಳಿಕ ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಸುತ್ತು ಸಿಸಿ ಕ್ಯಾಮೆರಾ ಅಳವಡಿಸಿದ್ದರೂ, ಕ್ಷೇತ್ರದೊಳಗಿನ ಕೆಮೆರಾದ ವಯರನ್ನು ತುಂಡರಿಸಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಕಳ್ಳರು ಕಳವು ಕೃತ್ಯ ನಡೆಸುವ ಮೊದಲು ಸಿಸಿ ಕ್ಯಾಮೆರಾದ ವಯರನ್ನು ತುಂಡರಿಸಿರ ಬಹುದೆಂದು ಅದಾಂಜಿಸಲಾಗಿದೆ. ಕ್ಷೇತ್ರದ ಹೊರಗಡೆ ಮಾಡಿನ ಕೆಳಗೆ ಗಣಪತಿಯ ಬೆಳ್ಳಿಯ ಮುಚ್ಚುಗೆ, ಹಾಗೂ ದೇವರ ಅಭಿಷೇಕದ ಬೆಳ್ಳಿಯ ಶಂಖ ಪತ್ತೆಯಾಗಿದೆ. ಕಳ್ಳರು ಕಳವುಗೈದು ಹಿಂತಿರುಗುವಾಗ ಇವರ ಕೈಯಿಂದ ಕೆಳಗೆ ಬಿದ್ದಿರಬಹುದ್ದೆಂದು ಅಂದಾಜಿಸಲಾಗಿದೆ. ಪೊಲೀಸ್ ಶ್ವಾನದಳದವರು ಇನ್ನೂ ಆಗಮಿಸಲಿದ್ದು, ಕಳವು ಗೀಡಾದ ಆಭರಣಗಳು ಯಾವುದೆಲ್ಲಾ ಎಂಬುದು ಮುಂದಿನ ತನಿಖೆಯಿಂದ ತಿಳಿಯಬೇಕಷ್ಟೇ. ವಿಷಯ ತಿಳಿದು ಕ್ಷೇತ್ರಕ್ಕೆ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ ಕೆ ಪಾವೂರು, ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ, ಪಿ. ಸೋಮಪ್ಪ, ಸ್ಥಳೀಯ ವಾರ್ಡ್ ಸದಸ್ಯ ನಾರಾಯಣ ತುಂಗ ಆಗಮಿಸಿದ್ದು, ಘಟನೆಯನ್ನು ಖಂಡಿಸಿ, ಕಳವುಗೈದ ಆಭರಣಗಳನ್ನು ಪತ್ತೆ ಹಚ್ಚಿ, ಕಳವುಗೈದ ಕಳ್ಳರನ್ನು ಕೂಡಲೇ ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಲ್ಲಿ ಆಗ್ರಹಿಸಿದ್ದಾರೆ. ಇತ್ತೀಚೆಗೆ ಇದೇ ಪಂಚಾಯತ್ ಗೊಳಪಟ್ಟ ತಲಕಳ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕೂಡಾ ಕಳವು ನಡೆದಿತ್ತು.



