Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕ್ರೋಧಗಳನ್ನು ದಹಿಸುವ ಶ್ರೀ ಕ್ರೋಧಿನಾಮ ಸಂವತ್ಸರ. ಈ ಬಾರಿಯ ಯುಗಾದಿ ಹಬ್ಬ.

ಕ್ರೋಧಗಳನ್ನು ದಹಿಸುವ ಶ್ರೀ ಕ್ರೋಧಿನಾಮ ಸಂವತ್ಸರ
ಯುಗಾದಿ ಹಬ್ಬವನ್ನು ಸಂತೋಷ, ಸಂಭ್ರಮದಿಂದ ಆಚರಿಸಿ ಹಬ್ಬದ ದಿನ ಸಂಜೆ ಚಂದ್ರನನ್ನು ಪ್ರಾರ್ಥಿಸಿದರೆ ಸಕಲ ಸಂಕಷ್ಟವೂ ಪರಿಹಾರವಾಗುತ್ತದೆ ಎಂಬುದು ಹಲವರ ನಂಬಿಕೆ. ಸಾಂಪ್ರದಾಯಿಕವಾಗಿ ಬಂದ ಆಚರಣೆ ಇದು ಎನ್ನಲಾಗುತ್ತದೆ. ಯುಗಾದಿ ಹಬ್ಬ ಹೊಸ ವರ್ಷದ ಆಗಮನ. ಬೇವು-ಬೆಲ್ಲ ತಿಂದು ಸಿಹಿ ಒಬ್ಬಟ್ಟಿನ ಜೊತೆಗೆ ಊಟ ಸವಿಯುವದರೊಂದಿಗೆ ಯುಗಾದಿ ಆಚರಣೆಯನ್ನು ಮಾಡುತ್ತೇವೆ. ಹಬ್ಬದ ದಿನ ಬೆಳಗ್ಗೆ ಅಭ್ಯಂಜನ ಸ್ನಾನ ಮಾಡಿ ಶುದ್ಧಗೊಳ್ಳುತ್ತಾರೆ. ಮನೆ ಬಾಗಿಲಿಗೆ ಹೂವಿನ ಹಾರ, ಮಾವಿನ ಎಲೆಯ ತೋರಣ, ಬೇವಿನ ಎಲೆಗಳಿಂದ ಅಲಂಕಾರ ಮಾಡಲಾಗುತ್ತದೆ. ಜೊತೆಗೆ ಬೇವು ಬೆಲ್ಲ ಕುಟ್ಟಿ ಪುಡಿ ಮಾಡಿ, ಸಿಹಿ-ಕಹಿ ಎರಡನ್ನೂ ಸಮವಾಗಿ ಸ್ವೀಕರಿಸಿ ಹಬ್ಬದ ಊಟ ಸವಿದು ಸಂಜೆ ಹೊಸ ಬಟ್ಟೆ ಧರಿಸಿ ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಮಕ್ಕಳೆಲ್ಲಾ ಮನೆತುಂಬ ಓಡಾಡುತ್ತಾ ರಂಗಿನ ಉಡುಪು ಧರಿಸಿ ನಗುತ್ತಾ ಆಟವಾಡುತ್ತಿರುತ್ತಾರೆ. ಮಹಿಳೆಯರೆಲ್ಲಾ ಲಘುಬಗೆಯಿಂದ ವಿವಿಧ ತೆರೆನಾದ ಅಡುಗೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಪುರುಷರೆಲ್ಲಾ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಾರೆ. ಯುಗಾದಿ ಹಬ್ಬ ಅಂದರೆ ಹೊಸ ವರ್ಷದ ಆಗಮನ. ಮುಂದಿನ ದಿನಗಳು ಸಂತೋಷದಿಂದ ಕೂಡಿರಲಿ ಎಂಬುದರ ಮೊದಲ ಹೆಜ್ಜೆಯದು. ಆದ್ದರಿಂದ ಯುಗಾದಿ ದಿನ ಆದಷ್ಟು ಖುಷಿಯಿಂದ ಮನೆಯವರೊಡನೆ ಕಾಲ ಕಳೆದು, ದೇವರ ಪೂಜೆಯಲ್ಲಿ ತೊಡಗಿಕೊಳ್ಳುತ್ತಾರೆ. ಬಾಳೆ ಎಲೆಯಲ್ಲಿ ಊಟ ಬಾಳೆ ಎಲೆಯಲ್ಲಿ ಸಿಹಿ ಪದಾರ್ಥದ ಜೊತೆ ಊಟ ಮಾಡುವುದೇ ಖುಷಿ. ಜೊತೆಗೆ ಬಾಳೆಯಲ್ಲಿ ವಿವಿಧ ಖಾದ್ಯಗಳನ್ನು ಸವಿಯುತ್ತಿದ್ದರೆ ಅದು ನೀಡುವ ರುಚಿಗೆ ಸಾಟಿ ಬೇರಿಲ್ಲ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ನೆಲಕ್ಕೆ ಕೂತು ಬಾಳೆ ಎಲೆ ಊಟ ಮಾಡುವುದು ಸಾಂಪ್ರದಾಯಿಕವಾಗಿ ಬಂದಿರುತ್ತದೆ. ಅದರಲ್ಲೂ ಹಬ್ಬದ ದಿನದಂದು ಹಿರಿಯರಿಂದ ಕಿರಿಯರವರೆಗೆ ಎಲ್ಲರೂ ಒಟ್ಟಿಗೆ ಕೂತು ಹಬ್ಬದ ದಿನ ಬಾಳೆ ಎಲೆಯಲ್ಲಿ ಊಟ ಮಾಡುತ್ತಾರೆ. ಹಬ್ಬದ ದಿನ ಅಥವಾ ಮರುದಿನ ಸಂಜೆ ಚಂದ್ರನ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಹಬ್ಬದ ಆಚರಣೆಯ ದಿನದ ಸಂಜೆ ಚಂದ್ರ ಉದಯವಾದಾಗ ಮನೆಯ ಅಂಗಳದಲ್ಲಿ ನಿಂತು ಚಂದ್ರನನ್ನು ನೋಡುತ್ತಾರೆ. ಅಕಸ್ಮಾತ್ ಹಬ್ಬದ ದಿನ ಕಾಣದಿದ್ದರೆ ಬಿದಿಗೆ ಚಂದ್ರನ ದರ್ಶನಕ್ಕಾಗಿ ಕಾತುರದಿಂದ ಕಾಯುತ್ತಾರೆ. ಈ ವರ್ಷದ ಮುಂದಿನ ದಿನಗಳಲ್ಲಿ ನಮ್ಮ ಬಾಳಿನಲ್ಲಿ ನೆಮ್ಮದಿ ಹೆಚ್ಚಾಗಿ ಇರಲಿ. ಕಷ್ಟಗಳು ಬಂದರೆ ಎದುರಿಸುವ ಶಕ್ತಿಯನ್ನು ಕೊಡಲಿ ಎಂದು ಬೇಡಿಕೊಳ್ಳುತ್ತಾರೆ. ಯುಗಾದಿ ಹಬ್ಬದಲ್ಲಿ ಬೇವು-ಬೆಲ್ಲಕ್ಕಿರುವಷ್ಟೇ ಪ್ರಾಧಾನ್ಯತೆ ಅಭ್ಯಂಜನ, ಪಂಚಾಂಗ ಶ್ರವಣ, ಮುಂತಾದವುಗಳಿಗಿರುತ್ತದೆ. ಆದರೆ, ಇದಕ್ಕಿಂತಲೂ ಹೆಚ್ಚು ವಿಶೇಷತೆಯಿರುವುದು ಹಬ್ಬದ ದಿವಸ ಸಂಜೆಯ ಚಂದ್ರ ದರ್ಶನಕ್ಕೆ. ಗಣಪತಿಯು ತನ್ನ ವಾಹನವಾದ ಇಲಿ ಮೇಲೆ ಹೋಗುತ್ತಿರುವಾಗ ಆಯ ತಪ್ಪಿ, ಗಣೇಶ ಕೆಳಗೆ ಬೀಳುತಾನೆ. ಇದನ್ನು ಕಂಡು ಚಂದ್ರ ಜೋರಾಗಿ ನಗುತ್ತಾನೆ. ಇದನ್ನು ಕಂಡ ಗಣೇಶನಿಗೆ ಕೋಪ ಬಂದು ಚೌತಿಯ ದಿನದಂದು ಅಂದರೆ ಗಣೇಶ ಚತುರ್ಥಿಯಂದು ನೋಡಿದರೆ ಅಪವಾದ ಬರುತ್ತದೆ ಎಂದು ಶಾಪವಿತ್ತಾಗ ಶಾಪ ವಿಮೋಚನೆಗಾಗಿ ಯುಗಾದಿ ಚಂದ್ರನ ದರ್ಶನದಿಂದ ಪಾಪ ಪರಿಹಾರವಾಗುವುದರೊಂದಿಗೆ ಮುಕ್ತಿಯು ದೊರೆಯುತ್ತದೆಂಬ ನಂಬಿಕೆ ಬಹಳ ಹಿಂದಿನಿಂದ ಪುರಾಣಗಳಿಂದ ತಿಳಿದು ಬಂದಿದೆ. ಚಂದ್ರನು ನವಗ್ರಹಗಳ ಆಕರ್ಷಕ ತಾರೆ. ಶುದ್ಧತೆ, ಬುದ್ಧಿವಂತಿಕೆ ಹಾಗೂ ಉತ್ತಮ ನಡವಳಿಕೆಯ ಸಂಕೇತವಾಗಿ ಬಿಂಬಿಸಲಾಗುತ್ತದೆ. ಅಂತಹ ಚಂದ್ರನನ್ನು ವರ್ಷದ ಆದಿ ಪರ್ವವಾದ ಯುಗಾದಿಯಂದು ನೋಡಿದರೆ ಇಡೀ ವರ್ಷವೆಲ್ಲಾ ಸುಖ-ಸಂತೋಷದಿಂದ ಬಾಳಬಹುದೆಂಬ ನಂಬಿಕೆಯಿಂದ ಹಿಂದಿನಿಂದಲೂ ಯುಗಾದಿ ಚಂದ್ರನನ್ನು ನೋಡುವುದು ವಾಡಿಕೆಯಾಗಿದೆ. ಯುಗಾದಿಯು ಅಮಾವಾಸ್ಯೆಯಲ್ಲಿ ಬರುವುದರಿಂದ ಮರು ದಿವಸದ ಚಂದ್ರನ ದರ್ಶನ ಸ್ವಲ್ಪ ಕಷ್ಟ. ಬಿದಿಗೆ ಚಂದ್ರ ಅರ್ಧಾಕಾರದ ಎಲೆಯಂತೆ ಗೋಚರಿಸಿ ಹರಸುತ್ತಾನೆ. ಯುಗಾದಿ ದಿನದಂದು ಕಾಣಿಸುವ ಚಂದ್ರನನ್ನು ಆಧರಿಸಿ ಹಿಂದೆ ವರ್ಷದ ಮಳೆ-ಬೆಳೆ, ರೋಗ-ರುಜಿನಗಳು, ಏಳು-ಬೀಳುಗಳ ಬಗ್ಗೆ ವಿಚಾರ ಮಾಡುತ್ತಿದ್ದರು. ಯುಗಾದಿಯಂದು ಚಂದ್ರನು ಅತ್ಯಂತ ಚಿಕ್ಕದಾಗಿ ಒಂದು ಪುಟ್ಟ ಗೆರೆಯ ರೀತಿಯಲ್ಲಿ ವೀಕ್ಷಿಸಲು ಕಾಣ ಸಿಗುವುದರಿಂದ ಚಂದ್ರನ ಆಕಾರವನ್ನು ಆಧರಿಸಿ ವರ್ಷದ ಭವಿಷ್ಯವನ್ನು ನಿರ್ಧರಿಸುತ್ತಿದ್ದರು. ಅದಕ್ಕೆಂದೇ ಹೊಸ ವರ್ಷದ ಪಂಚಾಂಗವನ್ನು ಪಠಿಸಿ, ಅನಂತರ ಚಂದ್ರ ದರ್ಶನವನ್ನು ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ವರ್ಷ ತೊಡಕು ಯುಗಾದಿ ಹಬ್ಬದ ಮಾರನೆಯ ದಿನವನ್ನು ವರ್ಷ ತೊಡಕು ಎಂದು ಆಚರಿಸುತ್ತಾರೆ. ವರ್ಷ ಪೂರ್ತಿ ಯಾವ ತೊಡಕುಗಳೂ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವ ದಿನ. ಹಾಗಾಗಿ ಯುಗಾದಿ ದಿನದಷ್ಟೇ ಪ್ರಾಮುಖ್ಯತೆ ಈ ದಿನಕ್ಕೂ ಇರುತ್ತದೆ.
ಡಾ. ಆರ್. ಶೈಲಜ ಶರ್ಮ ಬೆಂಗಳೂರು-85

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.