ಕಾಸರಗೋಡು: ಕಾಸರಗೋಡು ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿ (ಎಡಿಎಂ)ಯಾಗಿ ಉದಯಕುಮಾರ್ ಪೆರ್ಲ ಅವರು ಇಂದು ಕುಮಾರಿ ಶ್ರುತಿ ಕೆ.ವಿ. ಅವರಿಂದ ಅಧಿಕಾರ ಸ್ವೀಕರಿಸಿ ಹುದ್ದೆಯನ್ನು ಅಲಂಕರಿಸಿದರು. ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಹುಜೂರ್ ಶಿರಸ್ತೆದಾರ್ ಸತೀಶ್ ಕುಮಾರ್, ಸೂಪರಿಂಟೆಂಡೆಂಟ್ ಲೋಕೇಶ್ ಎಂ.ಬಿ. ಹಾಗೂ ಜಿಲ್ಲಾಡಳಿತದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
1997ರಲ್ಲಿ ಕಾಸರಗೋಡು ಭೂಸ್ವಾಧೀನ (ಲ್ಯಾಂಡ್ ಅಕ್ವಿಸಿಷನ್) ಕಚೇರಿಯಲ್ಲಿ ಎಲ್.ಡಿ. ಕ್ಲರ್ಕ್ ಆಗಿ ಸರ್ಕಾರಿ ಸೇವೆಗೆ ಸೇರ್ಪಡೆಯಾದ ಉದಯಕುಮಾರ್ ಪೆರ್ಲ ಅವರು ಬಳಿಕ ಕಾಸರಗೋಡು ತಾಲ್ಲೂಕು ಕಚೇರಿಯಲ್ಲಿ ಸೀನಿಯರ್ ಕ್ಲರ್ಕ್ ಆಗಿ ಕಾರ್ಯನಿರ್ವಹಿಸಿದರು. 2006ರಲ್ಲಿ ಬಡ್ತಿ ಹೊಂದಿ ಗ್ರಾಮಾಧಿಕಾರಿಯಾಗಿ ಶೇಣಿ, ಆದೂರು, ಬದಿಯಡ್ಕ, ಕುಂಬಡಾಜೆ ಹಾಗೂ ಬೇಳ ಗ್ರಾಮಗಳಲ್ಲಿ ಸೇವೆ ಸಲ್ಲಿಸಿದರು.
2014ರಲ್ಲಿ ಜೂನಿಯರ್ ಸೂಪರಿಂಟೆಂಡೆಂಟ್ ಆಗಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಬಡ್ತಿ ಹೊಂದಿದ ಅವರು, ನಂತರ ಮಂಜೇಶ್ವರ ತಾಲ್ಲೂಕು ಕಚೇರಿ, ಎಲ್.ಎ.ಎನ್.ಎಚ್. ಕಾಸರಗೋಡು ಹಾಗೂ ಆರ್.ಡಿ. ಕಚೇರಿಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. 2020ರಲ್ಲಿ ಸೀನಿಯರ್ ಸೂಪರಿಂಟೆಂಡೆಂಟ್ ಆಗಿ ಬಡ್ತಿ ಹೊಂದಿ, 2021ರಿಂದ 2025ರವರೆಗೆ ಕಾಸರಗೋಡು ಭೂ ನ್ಯಾಯಮಂಡಳಿ (ಲ್ಯಾಂಡ್ ಟ್ರಿಬ್ಯುನಲ್)ಯಲ್ಲಿ ಸೇವೆ ಸಲ್ಲಿಸಿ ಭೂ ಸುಧಾರಣೆಗೆ ಸಂಬಂಧಿಸಿದ ಅನೇಕ ಕಡತಗಳನ್ನು ಸಮಯೋಚಿತವಾಗಿ ವಿಲೇವಾರಿ ಮಾಡುವ ಮೂಲಕ ಗಮನಾರ್ಹ ಸೇವೆ ಸಲ್ಲಿಸಿದರು.
ಜಿಲ್ಲಾಡಳಿತದ “ಆಪರೇಶನ್ ಸ್ಮೈಲ್” ಯೋಜನೆಯಡಿ ಪಾವೂರು, ಉದ್ಯಾವರ ಹಾಗೂ ಕುಂಜತ್ತೂರು ಗ್ರಾಮಗಳ ವ್ಯಾಪ್ತಿಯ 135 ಕೊರಗ ಸಮುದಾಯದ ಕುಟುಂಬಗಳಿಗೆ ಕ್ರಯ ಪ್ರಮಾಣಪತ್ರಗಳನ್ನು ವಿತರಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದಕ್ಕಾಗಿ ಜಿಲ್ಲಾಧಿಕಾರಿಗಳ ಉತ್ತಮ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದರು.
ಮಂಜೇಶ್ವರ ತಾಲ್ಲೂಕಿನ ಎಣ್ಮಕಜೆ ಗ್ರಾಮದ ಪೆರ್ಲದ ದಿವಂಗತ ಮಾಧವ ಚೆಟ್ಟಿಯಾರ್ ಮತ್ತು ಶಾರದ ದಂಪತಿಗಳ ಪುತ್ರರಾಗಿರುವ ಉದಯಕುಮಾರ್ ಪೆರ್ಲ ಅವರ ಪತ್ನಿ ಶ್ರೀಜಾ ಎಂ.ವಿ. ಕೃಷ್ಣ (ಎಚ್.ಎಸ್.ಎಸ್.ಟಿ., ಎನ್.ಎಚ್.ಎಸ್.ಎಸ್. ಪೆರಡಾಲ) ಆಗಿದ್ದು, ಮಕ್ಕಳು ಅಜಯ್ ಸಾತ್ವಿಕ್ ಮತ್ತು ಶ್ರೀಲಕ್ಷ್ಮಿ ವಿದ್ಯಾರ್ಥಿಗಳಾಗಿದ್ದಾರೆ.
ಇದೇ ಸಂದರ್ಭದಲ್ಲಿ ನೂತನ ಎಡಿಎಂ ಅವರನ್ನು ವಿವಿಧ ನೌಕರರ ಸಂಘಟನೆಗಳ ಪ್ರತಿನಿಧಿಗಳು ಅಭಿನಂದಿಸಿದರು. ಎನ್‌ಜಿಒ ಅಸೋಸಿಯೇಷನ್ ರಾಜ್ಯ ಸಮಿತಿಯ ಪರವಾಗಿ ರಾಜ್ಯ ಕಾರ್ಯದರ್ಶಿ ಸುರೇಶ್ ಪೆರಿಯಾಂಗಾನಂ, ಜಿಲ್ಲಾ ಸಮಿತಿಯ ಪರವಾಗಿ ಜಿಲ್ಲಾಧ್ಯಕ್ಷ ಎ.ಟಿ. ಶಶಿ ಹಾಗೂ ಯುಟಿಇಎಫ್ ಪರವಾಗಿ ಜಿಲ್ಲಾಧ್ಯಕ್ಷ ಲೋಕೇಶ್ ಎಂ.ಬಿ. ಆಚಾರ್ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್‌ಇಯು ರಾಜ್ಯ ಉಪಾಧ್ಯಕ್ಷ ಶಫೀಕ್ ಓ.ಎಂ., ಕೆಜಿಒಯು ಸದಸ್ಯರಾದ ರಾಮು ಕೆ.ಬಿ. ಮತ್ತು ಶ್ರೀಕುಮಾರ್ ವಿ., ಎನ್‌ಜಿಒ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ವಿ.ಟಿ.ಪಿ. ರಾಜೇಶ್, ಕೋಶಾಧಿಕಾರಿ ವಿ.ಎಂ. ರಾಜೇಶ್, ರಾಜ್ಯ ಸೆಕ್ರೆಟರಿಯೇಟ್ ಸದಸ್ಯೆ ವಿ.ವಿ. ವತ್ಸಲಾ, ಜಯರಾಜ್, ಶಫೀಕ್ ಎ., ಪ್ರವೀಣ್ ವರಿಲ್ಲಂ, ಇಗ್ನಿಸಿಯಸ್ ಪೀಟರ್, ಬಾಲಕೃಷ್ಣ ಪೆರಿಯಾಂಗಾನಂ, ಪ್ರದೀಶ್ ಬಾಬು, ರಿಜಿತ್, ವಿನೋದ್ ಕುಮಾರ್ ಪಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮುಸ್ಲಿಂ ಲೀಗ್ ಮುಖಂಡ ಮೊಹಮ್ಮದ್ ಚಾಯಿಂಡಡಿ ಅವರು ಹೂಗುಚ್ಛ ನೀಡಿ ನೂತನ ಎಡಿಎಂ ಅವರನ್ನು ಅಭಿನಂದಿಸಿದರು.
