ಶ್ರೀ ಪುರುಷೋತ್ತಮ ಯಾಗ ಸಂಪನ್ನ.
ಉಡುಪಿ: ನಮ್ಮ ಬದುಕಲ್ಲಿ ಪುರುಷೋತ್ತಮರಾದಾಗ ಮಾತ್ರ ಬದುಕು ಸಾರ್ಥಕವಾಗುವುದು ಕೇವಲ ಪುರುಷೋತ್ತಮ ಯಾಗ ಮಾಡುವುದು ಮಾತ್ರವಲ್ಲ, ಬದುಕಲ್ಲೂ ಕೂಡಾ ಪೂರಕ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಸನ್ನಡತೆಯಿಂದ ಪುರುಷೋತ್ತಮರಾಗಬೇಕು.ಅ ನಿಟ್ಟಿನಲ್ಲಿ ಯಾಗ ನಮಗೆ ಪ್ರೇರಣೆಯಾಗಲಿ ಎಂದು ಕಟಪಾಡಿ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು. ಶ್ರೀಗಳವರ ಜನ್ಮವರ್ಧಂತಿಯ ಸುವರ್ಣ ಮಹೋತ್ಸವ ಅಂಗವಾಗಿ ವಿಶ್ವಬ್ರಾಹ್ಮಣ ಪ್ರತಿಷ್ಠಾನ ಹುಬ್ಬಳ್ಳಿ ವತಿಯಿಂದ ಪಡುಕುತ್ಯಾರಿನ ಮಹಾಸಂಸ್ಥಾನದ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ಭಾನುವಾರ ನಡೆದ ಶ್ರೀ ಪುರುಷೋತ್ತಮ ಯಾಗ ಹಾಗೂ ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಹಸಿದವನು ಉಣ್ಣುವುದು ಸಹಜ ಪ್ರಕೃತಿ, ಇನ್ನೊಬ್ಬರ ಪಾಲಿನ ಅನ್ನವವನ್ನು ಕಿತ್ತು ತಿನ್ನುವುದು ವಿಕೃತಿ, ತಾನು ಹಸಿದಿದ್ದರೂ ಹಸಿದವನಿಗೆ ಅನ್ನ ನೀಡುವುದು ಸಂಸ್ಕೃತಿಯಾಗಿದೆ. ಸತ್ಕಾರ್ಯಗಳನ್ನು ಮಾಡುವುದರಿಂದ ಮನುಷ್ಯನು ಪುರುಷೊತ್ತಮನಾಗಬಹುದು. ವಾಯನ ದಾನ, ಆಫೂಪದಾನಗಳಿಂದ ಶ್ರೀ ಪುರುಷೋತ್ತಮ ಯಾಗ ನೆರವೇರಿಸುವುದರಿಂದ ಶ್ರೀ ಲಕ್ಷ್ಮೀನಾರಾಯಣರ ಅನುಗ್ರಹ ಪ್ರಾಪ್ತಿಯಾಗಿ ಸತ್ಫಲ ದೊರೆಯುತ್ತದೆ ಎಂದರು.
ನಡಿಗೆಯಿಂದ ದೇವಸ್ಥಾನದ ಬಳಿ ಹೋಗಬಹುದು, ನಡತೆಯಿಂದ ಮಾತ್ರ ದೇವರ ಬಳಿ ಹೋಗಲಿಕ್ಕೆ ಸಾಧ್ಯ. ಪರಿವರ್ತನೆ ಪ್ರಕೃತಿಯ ನಿಯಮ.ವಿಕಾರದ ಪರಿವರ್ತನೆಯಿಂದ ಸಮಾಜಕ್ಕೆ ಯಾವ ಪ್ರಯೋಜನವಿಲ್ಲ. ವಿಕಾಸದ ಪರಿವರ್ತನೆ ಸ್ವಂತಕ್ಕೂ ಸಮಾಜಕ್ಕೂ ಲಾಭವಿದೆ. ಕರ್ಮಫಲವನ್ನು ಎಲ್ಲರೂ ಉಣ್ಣಲೇ ಬೇಕು, ಅಧಿಕಾರ ಬಲದಿಂದ ತಾತ್ಕಾಲಿಕವಾಗಿ ಮುಂದೂಡಬಹುದು, ಅವರಿಗೆ ಸಂತೋಷ ಪಡಬಹುದು ಆದರೆ ಭಗವಂತನ ಕೊನೆಯ ತೀರ್ಪು ಕರ್ಮಫಲಕ್ಕೆ ಅನುಗುಣವಾಗಿಯೇ ಇರುತ್ತದೆ. ಸುಸಂಸ್ಕೃತರಾಗಿ ಮಾನವನಿಂದ ಮಾಧವನೆಡೆಗೆ ಹೆಜ್ಜೆಯಿಟ್ಟಾಗ ಬದುಕು ಸಾರ್ಥಕ ಎಂದು ಅವರು ನುಡಿದರು.
ಆನೆಗುಂದಿ ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸರಾದ ಶಂಕರಾಚಾರ್ಯ ಗುರುನಾಥ ಆಚಾರ್ಯ ಪಂಡಿತ್ ಕಡ್ಲಾಸ್ಕರ್ ಅವರು "ಅಧಿಕಮಾಸ ಹಾಗೂ ಶ್ರೀ ಪುರುಷೋತ್ತಮ ಯಾಗದ ಮಹತ್ವ" ಎಂಬ ವಿಷಯದಲ್ಲಿ ಧಾರ್ಮಿಕ ಪ್ರವಚನ ನೀಡಿ, ಮನಸ್ಸಿನ ಕೊಳೆ ಮತ್ತು ದೋಷಗಳನ್ನು ಹೊರಹಾಕುವ ಮಾಸವೇ ಮಲಮಾಸ. ಈ ಮಾಸಕ್ಕೆ ಶ್ರೀ ಪುರುಷೋತ್ತಮನೇ ಅಧಿಪತಿ. ಶ್ರೀ ಲಕ್ಷ್ಮೀ ಸಹಿತ ವಿಷ್ಣುವಿನ ಪೂಜೆಯನ್ನು ಮಾಡುವುದರಿಂದ ಅಧಿಕ ಮಾಸದಲ್ಲಿ ಅಧಿಕಫಲ ಪ್ರಾಪ್ತಿಯಾಗುತ್ತದೆ ಎಂದರು.
ವೇ ಬ್ರ ಶ್ರೀ ಶ್ರೀಧರ ಪುರೋಹಿತ್ ಕಟಪಾಡಿ, ಬ್ರ ಶ್ರೀ ಅಕ್ಷಯ ಶರ್ಮ ಕಟಪಾಡಿ, ಪೂರ್ವ ಚಾತ್ರ ಸಂಘದ ಮನೋಜ್ ಶರ್ಮಾ, ವಿಕಾಸ ಶರ್ಮ, ವಿಜಯ ಶರ್ಮ ಹಾಗೂ ನಾಗದರ್ಮೇಂದ್ರ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆಯ ವಿದ್ಯಾರ್ಥಿಗಳ ಸಹಕಾರದಲ್ಲಿ ಮಹಾಯಾಗ, ಶ್ರೀ ಗುರುಪಾದುಕಾ ಪೂಜೆ, ೧೦೮ ದಂಪತಿ ಪೂಜೆ, ವಾಯನ ದಾನ, ಅಪೂಪಾದಿ ದಾನ ವೈದಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು.
ಹುಬ್ಬಳ್ಳಿ ವಿಶ್ವ ಬ್ರಾಹ್ಮಣ ಪ್ರತಿಷ್ಠಾನದ ಅಧ್ಯಕ್ಷ ಅಶೋಕ್ ಜತ್ತಿ, ಪದಾಧಿಕಾರಿಗಳಾದ ಶಂಕರ್ ನಿಡಗುಂದಿ, ಸುಹಾಸ್ ಸವಣೂರು, ನರಗುಂದ ಮೋಹನ್, ಆರ್ ಎಂ. ಪತ್ತಾರ್, ಗುರುನಾಥ ಆಚಾರ್ಯ ಹುಬ್ಬಳ್ಳಿ, ಬಾಗಲಕೋಟೆಯ ಗುರುರಾಜ ಅಗಳದಕಟ್ಟಿ, ಐ ಕೆ ಪತ್ತಾರ್, ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ ಶ್ರೀಧರ ಆಚಾರ್ಯ ಒಡೆಯರ ಹೋಬಳಿ,ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ಪಿ ವಿ ಗಂಗಾಧರ ಆಚಾರ್ಯ ಉಡುಪಿ,ಅಸೆಟ್ ಅಧ್ಯಕ್ಷ ಸೂರ್ಯಕುಮಾರ ಹಳೆಯಂಗಡಿ, ಗೋ ಟ್ರಸ್ಟ್ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ, ಗುರು ಸೇವಾ ಪರಿಷತ್ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮಣ್ಣು, ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ, ಪೂರ್ವ ಚಾತ್ರ ಅಧ್ಯಕ್ಷ ಕೇಶವ ಶರ್ಮ, ಕೆ.ಎಂ ಗಂಗಾಧರ ಆಚಾರ್ಯ ಕೊಂಡೆಯೂರು, ಗುರುರಾಜ್ ಕೆ ಜೆ ಆಚಾರ್ಯ, ಲೋಲಾಕ್ಷ ಶರ್ಮ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ವಿವಿಧ ದೇವಸ್ಥಾನಗಳ ಆಡಳಿತ ಮೊಕ್ತೇಸರರು ಭಾಗವಹಿಸಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.
