ಮಂಜೇಶ್ವರ: ಸಮಗ್ರ ಶಿಕ್ಷಾ ಕೇರಳ, ಬಿ.ಆರ್.ಸಿ ಮಂಜೇಶ್ವರ ಹಾಗೂ ಕಾಸರಗೋಡು ಜಿಲ್ಲಾ ಪಂಚಾಯತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಸೃಜನಶೀಲ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ‘ವೈವಿಧ್ಯ - ವಿಜಯೋತ್ಸವ’ ಶೈಕ್ಷಣಿಕ ಕಾರ್ಯಕ್ರಮ ಸರಕಾರಿ ಪ್ರೌಢಶಾಲೆ ಉದ್ಯಾವರದಲ್ಲಿ ಯಶಸ್ವಿಯಾಗಿ ಜರುಗಿತು. ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಅವರು ಉದ್ಘಾಟಿಸಿ ‘ವಿದ್ಯಾರ್ಥಿಗಳ ಬೌದ್ಧಿಕ ಪ್ರಗತಿಗೆ ಕಲಿಕೆಯೇ ಮೂಲಾಧಾರ. ಪ್ರತಿಯೊಬ್ಬ ವಿದ್ಯಾರ್ಥಿಯೂ ವಿದ್ಯಾಭ್ಯಾಸದಿಂದ ವಂಚಿತರಾಗಬಾರದು’ ಎಂಬ ಆಶಯದೊಂದಿಗೆ, ಅವರಿಗೆ ಬೇಕಾದ ಸಕಲ ನೆರವು ಜಿಲ್ಲಾ ಪಂಚಾಯತ್ ವತಿಯಿಂದ ಒದಗಿಸಿ ಕೊಡುವುದಾಗಿ ತಿಳಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶಿವರಾಜ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಇಂತಹ ಕಾರ್ಯಕ್ರಮಗಳು ಪೂರಕ ಎಂದು ಆಶಿಸಿದರು.
ಬಿ.ಆರ್.ಸಿ ಮಂಜೇಶ್ವರದ ಬಿ.ಪಿ.ಸಿ ರಾಜಗೋಪಾಲನ್ ಪಿ. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಗುಣಮಟ್ಟದ ಶೈಕ್ಷಣಿಕ ಪದ್ಧತಿಯ ಮಹತ್ವವನ್ನು ವಿವರಿಸಿದರು. ಮಂಜೇಶ್ವರದ ಸಹಾಯಕ ವಿದ್ಯಾಧಿಕಾರಿಗಳಾದ ಜಾರ್ಜ್ ಕ್ರಾಸ್ತ ಸಿ. ಎಚ್. ಅವರು ವಿದ್ಯಾರ್ಥಿಗಳ ಸೃಜನಶೀಲ ಬರವಣಿಗೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾದ ಹಸ್ತ ಪ್ರತಿಯನ್ನು ಅನಾವರಣಗೊಳಿಸಿ ಮಕ್ಕಳಿಗೆ ಪ್ರೋತ್ಸಾಹಕ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಬಿ.ಆರ್.ಸಿ ಟ್ರೈನರ್ ಶ್ರೀಮತಿ ಸುಮಯ್ಯ ಎಂ.ಎ, ಎಂ.ಪಿ.ಟಿ.ಎ ಅಧ್ಯಕ್ಷರಾದ ಶ್ರೀಮತಿ ಆಸೀನ ಕೆ., ಪಿ.ಟಿ.ಎ ಉಪಾಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್ ಹಾಗೂ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಮಲ್ಲಿಕಾ ಜಿ. ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶಾಲೆಯ ಮುಖ್ಯ ಶಿಕ್ಷಕರಾದ ನಾರಾಯಣ ಡಿ. ಸ್ವಾಗತಿಸಿದರು. ಸಮಗ್ರ ಸಂಚಾಲಕರಾದ ಶ್ರೀಮತಿ ಸಾಧನ ಪಿ. ವಂದನಾರ್ಪಣೆ ಮಾಡಿದರು. ಸ್ಟಾಫ್ ಸೆಕ್ರೆಟರಿ ರಾಜೇಶ್ ಕುಮಾರ್ ಯು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
