ಬೆದ್ರಡ್ಕ ಜಾತ್ರೆ – ಬಂಡಿ ಉತ್ಸವ: ಮಾರ್ಚ್ 30ರಿಂದ ಏಪ್ರಿಲ್ 4ರವರೆಗೆ
ಬೆದ್ರಡ್ಕ: ಕುಂಬಳೆ ಸೀಮೆಯ ನಾಲ್ಕು ದೈವಸ್ಥಾನಗಳಲ್ಲಿ ಒಂದಾದ ಬೆದ್ರಡ್ಕ ಶ್ರೀ ಪೂಮಾಣಿ–ಕಿನ್ನಿಮಾಣಿ ದೈವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಬಂಡಿ ಉತ್ಸವವು 2026ರ ಮಾರ್ಚ್ 30ರಿಂದ ಏಪ್ರಿಲ್ 4ರವರೆಗೆ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರ ಅವರ ದಿವ್ಯ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಭಾವಪೂರ್ಣವಾಗಿ ಜರುಗಲಿದೆ.
ಕಾರ್ಯಕ್ರಮದ ಅಂಗವಾಗಿ ಮಾರ್ಚ್ 30ರಂದು ಸಂಜೆ 4.00 ಗಂಟೆಗೆ ಕೋಟೆಕುಂಜ ಮಾಳ್ಯ ಮೂಲಸ್ಥಾನದಿಂದ ಶ್ರೀ ಪೂಮಾಣಿ–ಕಿನ್ನಿಮಾಣಿ ದೈವಗಳ ಕೀರ್ವಾಳು ಆಗಮಿಸಲಿದ್ದು, ರಾತ್ರಿ 7.00 ಗಂಟೆಗೆ ತಂತ್ರಿವರ್ಯರಿಂದ ಧ್ವಜಾರೋಹಣ ನೆರವೇರಲಿದೆ. ಬಳಿಕ ತಂಬಿಲ ಹಾಗೂ ಮಹಾಪೂಜೆ ನಡೆಯಲಿದೆ. ರಾತ್ರಿ 8.00 ಗಂಟೆಯಿಂದ ಶ್ರೀ ಹರೀಶ್ ಅಮ್ಚಿಕೆರೆ ಬಳಗದವರಿಂದ ಭಕ್ತಿಭಾವ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.
ಮಾರ್ಚ್ 31ರಂದು ಸಂಜೆ 7.00 ಗಂಟೆಯಿಂದ ಶ್ರೀರಾಮ ಯಕ್ಷಗಾನ ಕಲಾಸಂಘ, ಬೆದ್ರಡ್ಕ ಇವರ ಪ್ರಾಯೋಜಕತ್ವದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ “ಶ್ರೀದೇವಿ ಮಹಾತ್ಮೆ” ಎಂಬ ಯಕ್ಷಗಾನ ಬಯಲಾಟ ಸೇವೆ ನಡೆಯಲಿದೆ. ರಾತ್ರಿ 10.00 ಗಂಟೆಗೆ ಕೊಟ್ಯತ್ತಾಯನ ತಂಬಿಲ ಹಾಗೂ ಮಹಾಪೂಜೆ ಜರುಗಲಿದೆ.
ಏಪ್ರಿಲ್ 1ರಂದು ಮಧ್ಯಾಹ್ನ 1.00 ಗಂಟೆಗೆ ಶ್ರೀ ಕಿನ್ನಿಮಾಣಿ ದೈವದ ನೇಮೋತ್ಸವ ನಡೆಯಲಿದ್ದು, ಸಂಜೆ 6.30 ಗಂಟೆಯಿಂದ ಅಮ್ಮ ಕಲಾವಿದರು, ಕುಡ್ಲ ಇವರಿಂದ “ಆಣ್ ಮಗೆ” ಎಂಬ ತುಳು ಹಾಸ್ಯ ನಾಟಕ ಪ್ರದರ್ಶನವಾಗಲಿದೆ. ರಾತ್ರಿ 10.00 ಗಂಟೆಗೆ ಪಾಪೆ ಬಂಡಿ ಉತ್ಸವ, ಬಂಡಿ ಕಾಣಿಕೆ, ತಂಬಿಲ ಹಾಗೂ ಮಹಾಪೂಜೆ ನಡೆಯಲಿದೆ.
ಏಪ್ರಿಲ್ 2ರಂದು ಮಧ್ಯಾಹ್ನ 1.00 ಗಂಟೆಗೆ ಶ್ರೀ ಪೂಮಾಣಿ ದೈವದ ನೇಮೋತ್ಸವ ನಡೆಯಲಿದ್ದು, ಸಂಜೆ 7.00 ಗಂಟೆಯಿಂದ ಶ್ರೀ ಅಯ್ಯಪ್ಪ ಮಹಿಳಾ ಸಂಘ, ಬೆದ್ರಡ್ಕ ಇವರಿಂದ “ಫ್ಯೂಷನ್ ಕೈ ಕೊಟ್ಟ್ ಕಳಿ” ಎಂಬ ಸಮೂಹ ನೃತ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.00 ಗಂಟೆಗೆ ಕಣ್ಣೂರು ಮಾಳ್ಯ ಶ್ರೀ ಬೀರ್ಣಾಳ್ವ ದೈವದ ಮೂಲಸ್ಥಾನದಿಂದ ಹಾಗೂ ಪುತ್ತೂರುಕೊಟ್ಯ ಶ್ರೀ ಧೂಮಾವತೀ ದೈವಸ್ಥಾನದಿಂದ ದೈವಗಳ ಭಂಡಾರವು ಮೆರವಣಿಗೆಯೊಂದಿಗೆ ಕ್ಷೇತ್ರಕ್ಕೆ ಆಗಮಿಸಲಿದೆ. ರಾತ್ರಿ 8.30 ಗಂಟೆಗೆ ಕಲಾತಪಸ್ವಿ ಶ್ರೀ ಬಾಲಕೃಷ್ಣ ಮಾಸ್ಟರ್ ನಾಟ್ಯ ನಿಲಯ, ಮಂಜೇಶ್ವರ ಇವರ ಶಿಷ್ಯ ವೃಂದದವರಿಂದ “ನೃತ್ಯ ಸಮನ್ವಿತಂ” ಕಾರ್ಯಕ್ರಮವನ್ನು ದಿವಂಗತ ಜಗನ್ನಾಥ ಅಳ್ವ ಮತ್ತು ಯಮುನಾವತಿ ಜೆ. ಅಳ್ವ ಅವರ ಸ್ಮರಣಾರ್ಥವಾಗಿ ಅವರ ಮಕ್ಕಳು ಸೇವಾ ರೂಪದಲ್ಲಿ ಪ್ರಸ್ತುತಪಡಿಸಲಿದ್ದಾರೆ. ರಾತ್ರಿ 11.00 ಗಂಟೆಗೆ ಪಾಪೆ ಬಂಡಿ ಉತ್ಸವ, ವಿಶೇಷ ಸಿಡಿಮದ್ದು ಪ್ರದರ್ಶನ, ಬಂಡಿ ಕಾಣಿಕೆ ಹಾಗೂ ತಂಬಿಲ ಮಹಾಪೂಜೆ ನಡೆಯಲಿದೆ.
ಏಪ್ರಿಲ್ 3ರಂದು ಮಧ್ಯಾಹ್ನ 12.30 ಗಂಟೆಗೆ ಶ್ರೀ ಬೀರ್ಣಾಳ್ವ ದೈವದ ನೇಮೋತ್ಸವ ಮತ್ತು ಮಧ್ಯಾಹ್ನ 3.30 ಗಂಟೆಗೆ ಶ್ರೀ ಧೂಮಾವತೀ ದೈವದ ನೇಮೋತ್ಸವ ನಡೆಯಲಿದೆ. ರಾತ್ರಿ 8.00 ಗಂಟೆಗೆ ಉಜಿರೆ ಕೆರೆ ಆರಾ ಟು ಕಟ್ಟೆಯಲ್ಲಿ ಮಂಗಳ ಸ್ನಾನ (ಆರಾಟು) ನಡೆಯಲಿದ್ದು, ಬಳಿಕ ದೈವಸ್ಥಾನದಲ್ಲಿ ತಂತ್ರಿವರ್ಯರಿಂದ ಧ್ವಜಾವರೋಹಣ ನೆರವೇರಲಿದೆ. ನಂತರ ತಂಬಿಲ, ಮಹಾಪೂಜೆ ಹಾಗೂ ಅಯ್ಯಂಗಾಯಿ ನಡೆಯಲಿದೆ.
ಏಪ್ರಿಲ್ 4ರಂದು ಬೆಳಿಗ್ಗೆ 8.00 ಗಂಟೆಗೆ ಕೋಟೆಕುಂಜ ಮಾಳ್ಯ ಮೂಲಸ್ಥಾನಕ್ಕೆ ಶ್ರೀ ಪೂಮಾಣಿ–ಕಿನ್ನಿಮಾಣಿ ದೈವಗಳ ಕೀರ್ವಾಳುಗಳು ಹಾಗೂ ಕಣ್ಣೂರು ಶ್ರೀ ಬೀರ್ಣಾಳ್ವ ದೈವದ ಮೂಲಸ್ಥಾನಕ್ಕೆ ಮತ್ತು ಪುತ್ತೂರುಕೊಟ್ಯ ಶ್ರೀ ಧೂಮಾವತೀ ದೈವಸ್ಥಾನಗಳಿಗೆ ದೈವಗಳ ಭಂಡಾರವು ಕ್ಷೇತ್ರದಿಂದ ವಾಪಸ್ಸು ತೆರಳಲಿದೆ.
ಆಸ್ತಿಕ ಬಂಧುಗಳಾದ ಭಕ್ತರು ಸಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತನು-ಮನ-ಧನಗಳಿಂದ ಸಹಕರಿಸಿ, ಸಿರಿಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ರಾಜನ್ ದೈವಗಳ ಕೃಪೆಗೆ ಪಾತ್ರರಾಗುವಂತೆ ದೈವಸ್ಥಾನದ ಆಡಳಿತ ಮಂಡಳಿ ಹಾಗೂ ಜಾತ್ರಾ ಮಹೋತ್ಸವ ಸಮಿತಿ ವಿನಂತಿಸಿದೆ.
