ವಿವಾಹ ಸಡಗರದ ಮಧ್ಯೆ ಭಾವೀವರ ನೇಣು ಬಿಗಿದು ಆತ್ಮಹತ್ಯೆ.
ಜನವರಿ 24, 2025
0
ವಿವಾಹ ಸಡಗರದ ಮಧ್ಯೆ ಭಾವೀವರ ನೇಣು ಬಿಗಿದು ಆತ್ಮಹತ್ಯೆ.
ಮಂಜೇಶ್ವರ: ವಿವಾಹದ ಸಡಗರದಲ್ಲಿದ್ದ ಭಾವೀವರನೋರ್ವ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಇಂದು ಅಪರಾಹ್ನ ಹೊಸಂಗಡಿ ಬಳಿಯ ಬೆಜ್ಜದಲ್ಲಿ ನಡೆದಿದೆ. ವಿವಾಹದ ಸಂಭ್ರಮದಲ್ಲಿದ್ದ ಮನೆ ಇದೀಗ ಸ್ಮಶಾನ ಮೌನ ಆವರಿಸಿದೆ. ಮೀಂಜ ಗ್ರಾಮ ಪಂಚಾಯತ್ ಗೊಳಪಟ್ಟ ಬೆಜ್ಜ ಐ. ಯಚ್. ಡಿ. ಪಿ ಕಾಲನಿ ನಿವಾಸಿ, ಕೂಲಿ ಕಾರ್ಮಿಕ ತನಿಯಪ್ಪ ಬೆಜ್ಜರ ಪುತ್ರ, ಫೆಬ್ರವರಿ 2 ರಂದು ವಿವಾಹಿತನಾಗಲಿದ್ದ ಅಜಿತ್ ಕುಮಾರ್ (28) ಮನೆ ಮುಂಭಾಗದ ಮಾವಿನ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವಕನಾಗಿದ್ದಾನೆ. ಮಜಿಬೈಲು ಸೇವಾ ಸಹಕಾರಿ ಬ್ಯಾಂಕ್ ನ ಉಪ್ಪಳ ಭಗವತೀ ಶಾಖೆಯಲ್ಲಿ ಕಳೆದ 6 ವರ್ಷಗಳಿಂದ ಖಾಯಂ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಜಿತ್ ನಿಗೆ ಹೊಸಂಗಡಿ ಬಳಿಯ ಅಂಗಡಿಪದವು ನಿವಾಸಿ ಯುವತಿಯೋರ್ವೆ ಜೊತೆ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಮುಂದಿನ ಫೆಬ್ರವರಿ 2 ರಂದು ಉಪ್ಪಳ ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿವಾಹ ನಡೆದು, ಅಪರಾಹ್ನ ಮಂಜೇಶ್ವರ ಕಲಾ ಸ್ಪರ್ಶಂನ ಸಭಾಂಗಣದಲ್ಲಿ ವಿವಾಹದ ಔತಣಕೂಟ ನಡೆಯಲಿಕ್ಕಿತ್ತು. ಇದಕ್ಕಾಗಿ ಅಜಿತ್ ಆಪ್ತರಿಗೆ ಹಾಗೂ ಕುಟುಂಬದ ಬಂಧು ಬಳಗದವರಿಗೆ ಆಮಂತ್ರಣ ಪತ್ರವನ್ನು ಕೂಡಾ ವಿತರಿಸಿದ್ದನು. ಅಲ್ಲದೆ ದೂರದಲ್ಲಿದ್ದವರಿಗೆ ದೂರವಾಣಿ ಮುಖಾಂತರ, ವಾಟ್ಸಾಪ್ ಮೆಸೆಜ್ ಮೂಲಕ ಮದುವೆಗೆ ಆಮಂತ್ರಿಸಿದ್ದನು ಎಂದು ಮನೆ ಮಂದಿ ತಿಳಿಸಿದ್ದಾರೆ. ಇಂದು ಬೆಳಗ್ಗೆ ಮನೆ ಮಂದಿ ಮದುವೆಯ ಕಾರ್ಯಕ್ರಮಗಳಿಗೆ ಸಾಮಗ್ರಿ ತರಲು ಹೊಸಂಗಡಿ ಪೇಟೆಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಚಿಕ್ಕಪ್ಪ ಮಾತ್ರವಿದ್ದು, ಅವರು ಮದ್ಯಾಹ್ನ ಊಟ ಮಾಡಿ ಮಲಗಿದ್ದರು. ಅಪರಾಹ್ನ 3.00 ಗಂಟೆ ವೇಳೆ ಅಜಿತ್ ನ ಮೃತದೇಹ ಮನೆ ಮುಂಭಾಗದ ಮಾವಿನ ಮರದಲ್ಲಿ ಕೇಬಲ್ ವಯರ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ಅಜಿತ್ ಮೃತಪಟ್ಟಿದ್ದಾನೆ. ಇದೀಗ ಮೃತದೇಹವನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ನಾಳೆ ಶವಮಹಜರು ನಡೆಸಿದ ಬಳಿಕ ಮನೆಗೆ ತರಲಾಗುವುದು ಎಂದು ಮನೆ ಮಂದಿ ತಿಳಿಸಿದ್ದಾರೆ. ಪ್ರಕರಣ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೃತಪಟ್ಟ ಅಜಿತ್ ತಂದೆ, ಸಹೋದರ - ಸಹೋದರಿಯರಾದ ಜೀತ್ ಕುಮಾರ್, ಹೇಮಂತ್ ಚೆನ್ನೈ, ವಿದ್ಯಾಶ್ರೀ, ವೀಣಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾನೆ. ಸಿಪಿಐ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತನಾಗಿದ್ದ ಅಜಿತ್ ಕುಮಾರ್ ಎ. ಐ.ವೈ, ಎಫ್ ನ ಬೆಜ್ಜ ಯುನಿಟ್ ಕಾರ್ಯದರ್ಶಿಯಾಗಿದ್ದಾನೆ.


