ಹೆಣ್ಣು ಚಲ ತೊಟ್ಟರೆ ಏನು ಬೇಕಾದರೂ ಸಾಧಿಸಬಹುದು. ಹೆಣ್ಣು ದೇವರಿಗೆ ಸಮ. ಸಮಾಜದಲ್ಲಿ ಧರ್ಮ ಜಾಗೃತಿ ಮೂಡಿಸಲು ತಾಯಿಯ ಪಾತ್ರ ಮಹತ್ತರ. - ಸಾದ್ವಿ ಶ್ರೀ ಮಾತನಂದಮಯೀ.
ಜನವರಿ 22, 2025
0
ಹೆಣ್ಣು ಚಲ ತೊಟ್ಟರೆ ಏನು ಬೇಕಾದರೂ ಸಾಧಿಸಬಹುದು. ಹೆಣ್ಣು ದೇವರಿಗೆ ಸಮ. ಸಮಾಜದಲ್ಲಿ ಧರ್ಮ ಜಾಗೃತಿ ಮೂಡಿಸಲು ತಾಯಿಯ ಪಾತ್ರ ಮಹತ್ತರ. - ಸಾದ್ವಿ ಶ್ರೀ ಮಾತನಂದಮಯೀ.
ಮಂಜೇಶ್ವರ: ಒಂದು ಹೆಣ್ಣು ಚಲ ತೊಟ್ಟರೆ ಏನು ಬೇಕಾದರೂ ಸಾಧಿಸಬಹುದು. ಹೆಣ್ಣು ದೇವರಿಗೆ ಸಮ. ಸಮಾಜದಲ್ಲಿ ಧರ್ಮ ಜಾಗೃತಿ ಮೂಡಿಸಲು ತಾಯಿಯ ಪಾತ್ರ ಮಹತ್ತರ. ತಾಯಿಯಲ್ಲಿರುವ ಎಲ್ಲಾ ಗುಣ ನಡತೆ ಮಕ್ಕಳಲ್ಲಿ ಸಂಸ್ಕಾರ ಮೂಡಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ
ಸಾದ್ವಿ ಮಾತಾನಂದಮಯೀ ನುಡಿದರು. ಅವರು ಸಂತಡ್ಕ ಶ್ರೀ ಅರಸು ಸಂಕಲ ದೈವ ಕ್ಷೇತ್ರದಲ್ಲಿ ನಡೆಯುತ್ತಿರುವ ಶ್ರೀ ಕ್ಷೇತ್ರ ಸಂತಡ್ಕ ಮಾಡದ ಶ್ರೀ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಮಾರಂಭದಲ್ಲಿ ನಡೆದ ಮಾತೃ ಸಂಗಮ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಆಶೀರ್ವಚನ ನೀಡಿದರು. ತಾಯಿ ಎಂದರೆ ಪಾವಿತ್ರ್ಯಳು ಅವರಲ್ಲಿ ಸಂಸ್ಕಾರ, ಅಧ್ಯಾತ್ಮಿಕ, ಚಿಂತನೆ ಮನೆ ಮಾಡಿದೆ. ಅದನ್ನ ಅರಿತು ಮಕ್ಕಳು ಮುಂದುವರಿದರೆ ಜೀವನ ಪಾವನವಾಗುತ್ತೆ ಎಂದು ತಮ್ಮ ಶುಭ ಸಂದೇಶದಲ್ಲಿ ನುಡಿದರು. ಶ್ರೀಮತಿ ಪಾರ್ವತಿ ಶ್ರೀಧರ ಭಟ್ ಮಾವೆ ಸಮಾರಂಭದ ಅಧ್ಯಕ್ಷತೆ ವಹಿಸಿದರು. ದೈಗೋಳಿ ಸಾಯಿನಿಕೇತನ ಸೇವಾಶ್ರಮದ
ಶ್ರೀಮತಿ ಡಾ. ಶಾರದಾ ಉದಯಕುಮಾರ್, ನಿವೃತ ಅಧ್ಯಾಪಿಕೆ ಶ್ರೀಮತಿ ಜಯಲಕ್ಷ್ಮಿ ಕಾರಂತ, ವಿಶ್ವ ಹಿಂದೂ ಪರಿಷತ್ ಮಾತೃಶಕ್ತಿ, ಕಣ್ಣೂರು ವಿಭಾಗ ಸಂಯೋಜಕಿ ಶ್ರೀಮತಿ ಮೀರಾ ಆಳ್ವ, ನಿವೃತ ಅಧ್ಯಾಪಿಕೆ ಶ್ರೀಮತಿ ಯಮುನಾ ಎ ಕುಂಬಳೆ, ಶ್ರೀಮತಿ ಮೀನಾಕ್ಷೀ ಸಿ.ಕೆ ಚಿಪ್ಪಾರ್ ಲಾಲ್‌ಬಾಗ್, ಶ್ರೀಮತಿ ರತ್ನಾವತಿ ಎಸ್ ಭಂಡಾರಿ ದಡ್ಡಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭಾಸಂಶನೆಗೈದರು. ಈ ವೇಳೆ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಪ್ರಸಾದ ವಿತರಣೆಗೆ ಕೈಚೀಲದ ವ್ಯವಸ್ಥೆಯನ್ನು ಸೇವಾ ರೂಪದಲ್ಲಿ ವಿತರಿಸಿದ ಸೆವೆಂತ್ ಹೀವೆನ್ ತೊಕ್ಕೊಟ್ಟುವಿನ ಶ್ರೀಮತಿ ದೀಪ್ತಿ ದೀಪಕ್ ಶೆಟ್ಟಿಯವರ ಪರವಾಗಿ ಬಂಧುವಾದ ಶ್ರೀಮತಿ ವಿಮಲ ವಿ. ಶೆಟ್ಟಿ ಇವರು ನೀಡಿದರು. ಇವರನ್ನು ಕ್ಷೇತ್ರದ ಬ್ರಹ್ಮ ಕಲಶೋತ್ಸವದ ಸಮಿತಿ ಪರವಾಗಿ ಸಾದ್ವಿ ಶ್ರೀಗಳು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಿದರು. ಕು. ಅದ್ವಿತಾ ಸಂತಡ್ಕ ಪ್ರಾರ್ಥನೆ ಹಾಡಿದರು. ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಸಂತಡ್ಕದ ಕಾರ್ಯದರ್ಶಿ ಶ್ರೀಮತಿ ಆಶಾಲತಾ ಸ್ವಾಗತಿಸಿ, ಶ್ರೀಮತಿ ಯಶ್ವಿತಾ ಉದಯ ಶೆಟ್ಟಿ ಹಾಗೂ ಶ್ರೀಮತಿ ಅಕ್ಷತಾ ಅಶೋಕ್ ಶೆಟ್ಟಿ ನಿರೂಪಿಸಿ, ಕು. ಅರ್ಪಿತಾ ರೈ ಸಂತಡ್ಕ ವಂದಿಸಿದರು. ಬಳಿಕ ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಅರಸು ಸಂಕಲ ಸೇವಾ ಬಳಗ ಸಂತಡ್ಕ ಪ್ರಾಯೋಜಕತ್ವದಲ್ಲಿ ಚಾ ಪರ್ಕ ಕಲಾವಿದೆರ್ ಕುಡ್ಲ ಇವರಿಂದ "ಏರ್ಲಾ ಗ್ಯಾರಂಟಿ ಅತ್ತ್" ತುಳು ನಾಟಕ ಪ್ರದರ್ಶನಗೊಂಡಿತು. ವೈದಿಕ ಕಾರ್ಯಕ್ರಮದಂತೆ ಬೆಳಗ್ಗೆ ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ಅನುಜ್ಞಾಕಲಶಾಭಿಷೇಕ, ಶ್ರೀ ದೈವಗಳ ಭಂಡಾರ ಆಗಮನ, ಬಿಂಬ ಶುದ್ದಿ ಕಲಶ, ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ, ಸಂಜೆ ವಾಗ್ದೇವಿ ಯಕ್ಷಗಾನ ಕಲಾ ಸಂಘ ಮೂಡಂಬೈಲು ಇವರಿಂದ ತಾಳಮದ್ದಳೆ, ಧ್ಯಾನಾಧಿವಾಸ, ಕಲಶಾಧಿವಾಸ, ಅಧಿವಾಸ ಹೋಮಗಳು ನಡೆಯಿತು. ಬ್ರಹ್ಮಕಲಶೋತ್ಸವಕ್ಕೆ ಇನ್ನಷ್ಟು ಮೆರಗು ನೀಡುವಲ್ಲಿ ಟೀಮ್ ಗರುಡ ಸಂತಡ್ಕ ವಿಶೇಷವಾಗಿ "ಗರುಡ, ನಾಗನೊಂದಿಗೆ ಶಿವನ ಲಿಂಗ"ದಲ್ಲಿ ನೀರು ಚಿಮ್ಮುವ ದೃಷ್ಯರೂಪಕವನ್ನು ಅಳವಡಿಸಿದ್ದು, ಇದು ರಾತ್ರಿಯ ವೇಳೆ ವಿದ್ಯುತ್ ದೀಪದಿಂದ ಕಂಗೊಳಿಸುತ್ತಿದೆ. ಸಾವಿರಾರು ಮಂದಿ ವೀಕ್ಷಿಸಿ, ತಮ್ಮ ಮೊಬೈಲ್ ಕೆಮರಾದಲ್ಲಿ ದೃಶ್ಯ ಸೆರೆ ಹಿಡಿಯುವುದರೊಂದಿಗೆ ಇದರ ಪಕ್ಕ ನಿಂತು ಸೆಲ್ಫಿ ತೆಗೆಯುವುದರಲ್ಲಿ ನಿಸ್ಸೀಮರಾಗುತ್ತಿರುವುದು ಕಂಡು ಬರುತ್ತಿದೆ.











