ವರ್ಕಾಡಿ ಪರಿಸರದಲ್ಲಿ ಮತ್ತೆ ಕಳವು. ಆರಾಧನಾಲಯ ಸೇರಿದಂತೆ ಅಂಗಡಿಯಿಂದ ಹಣ ದೋಚಿದ ಕಳ್ಳ. ಕಿಲೋ ಮೀಟರ್ ಅಂತರದಲ್ಲಿ ಮೂರು ಕಡೆ ಕಳವು. ಆರೋಪಿ ಬಂಧನಕ್ಕೆ ನಾಗರಿಕರ ಆಗ್ರಹ.
ನವೆಂಬರ್ 04, 2024
0
ವರ್ಕಾಡಿ ಪರಿಸರದಲ್ಲಿ ಮತ್ತೆ ಕಳವು. ಆರಾಧನಾಲಯ ಸೇರಿದಂತೆ ಅಂಗಡಿಯಿಂದ ಹಣ ದೋಚಿದ ಕಳ್ಳ. ಕಿಲೋ ಮೀಟರ್ ಅಂತರದಲ್ಲಿ ಮೂರು ಕಡೆ ಕಳವು. ಆರೋಪಿ ಬಂಧನಕ್ಕೆ ನಾಗರಿಕರ ಆಗ್ರಹ.
ಮಂಜೇಶ್ವರ: ಕಳೆದ ಎರಡು ತಿಂಗಳಿಂದ ವರ್ಕಾಡಿ, ಮೀಂಜ ಪಂಚಾಯತ್ ಪ್ರದೇಶದಲ್ಲಿ ಕಳವು ಪ್ರಕರಣಗಳು ನಡೆಯುತ್ತಲೇ ಇದ್ದು, ಪೊಲೀಸರಿಗೆ ಇದುವರೆಗೆ ಕಳ್ಳನನ್ನು ಬಂಧಿಸಲು ಸಾಧ್ಯವಾಗಿಲ್ಲ. ಇದೀಗ ನಿನ್ನೆ ಮತ್ತೆ ಮೂರು ಕಳವು ಪ್ರಕರಣಗಳು ವರ್ಕಾಡಿ ಭಾಗದಲ್ಲಿ ನಡೆದಿದ್ದು, ಮತ್ತೇ ನಾಗರೀಕರು ಆತಂಕಕ್ಕೀಡಾಗಿದ್ದಾರೆ. ವರ್ಕಾಡಿ ಬಜಿಲಕರಿಯದಲ್ಲಿರುವ ಸುಮಾರು 24 ವರ್ಷಗಳ ಇತಿಹಾಸವಿರುವ ಇನ್ಫೆಂಟ್ ಜೀಸಸ್ (ಬಾಲ ಏಸುವಿನ) ಗುಡಿಯ ಬಾಗಿಲಿನ ಚಿಲಕದ ಕೊಂಡಿಯನ್ನು ತುಂಡರಿಸಿ ಒಳ ನುಗ್ಗಿದ ಕಳ್ಳನೋರ್ವ ಕಾಣಿಕೆ ಡಬ್ಬಿಯ ಬೀಗ ಮುರಿದು ಹಣ ದೋಚಿದ ಘಟನೆ ನಡೆದಿದೆ. ಈ ಗುಡಿಯು ವರ್ಕಾಡಿ ಸೀಕ್ರೆಟ್ ಹಾರ್ಟ್ ಚರ್ಚ್ ನ ಆದಿನತೆಯಲ್ಲಿದ್ದು, ನಿನ್ನೆ ಬೆಳಗ್ಗೆ ಗುಡಿಯ ಮೇಲ್ವಿಚಾರಕಿ ಲೀನಾ ಕುಟಿನರವರು ಬಾಗಿಲು ತೆರೆಯಲೆಂದು ಗುಡಿಗೆ ತೆರಳಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ವರ್ಕಾಡಿ ಚರ್ಚ್ ನ ಫಾದರ್ ಬಾಸಿಲ್ ವಾಸ್ ರಿಗೆ ಮಾಹಿತಿ ನೀಡಿದ್ದು, ಚರ್ಚ್ ನ ಆಡಳಿತ ಮಂಡಳಿ ಸ್ಥಳ ಸಂದರ್ಶಿಸಿ ಬಳಿಕ ಮಂಜೇಶ್ವರ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಂಜೇಶ್ವರ ಪೊಲೀಸರು ಸಿಸಿ ಕ್ಯಾಮೆರಾದ ದೃಶ್ಯವನ್ನು ಪರಿಶೀಲಿಸಿದಾಗ ಓರ್ವ ವ್ಯಕ್ತಿ ಬೆಳ್ಳಂ ಬೆಳಗ್ಗೆ 4 ಗಂಟೆಗೆ ಚರ್ಚ್ ಗೆ ಬಂದು ಕಳವು ನಡೆಸುವ ಎಲ್ಲಾ ದೃಶ್ಯಗಳು ಲಭಿಸಿದೆ. ಇದರ ಆಧಾರದಲ್ಲಿ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಅಲ್ಲದೇ ಇದೇ ಚರ್ಚ್ ಗುಡಿಯಿಂದ ಸುಮಾರು 1 ಕಿಲೋ ಮೀಟರ್ ದೂರದಲ್ಲಿ ಪಾವಳ ಶ್ರೀ ಅಯ್ಯಪ್ಪ ಭಜನಾ ಮಂದಿರವಿದ್ದು, ಈ ಮಂದಿರದಲ್ಲಿ ಪರಿಸರದಲ್ಲಿ ಕೊರಗಜ್ಜ ಸ್ವಾಮಿಯ ಕಟ್ಟೆಯಿದೆ. ಈ ಕೊರಗಜ್ಜ ಸ್ವಾಮಿಯ ಕಾಣಿಕೆ ಡಬ್ಬಿ ಮಂದಿರದ ಮುಂಭಾಗದ ರಸ್ತೆಯ ಬದಿಯಿದೆ. ಈ ಕಾಣಿಕೆ ಡಬ್ಬಿಯಿಂದ ಕೂಡಾ ಬೀಗ ಮುರಿದು ಹಣ ಕಳವು ನಡೆದ ಘಟನೆ ನಡೆದಿದೆ. ಪ್ರತೀ ತಿಂಗಳು ಕಾಣಿಕೆ ಡಬ್ಬಿಯಿಂದ ಹಣವನ್ನು ಸಮಿತಿಯವರು ತೆರವುಗೊಳಿಸುತ್ತಿದ್ದು, ನಿನ್ನೆ ಬೆಳಗ್ಗೆ ತೆರೆಯಲು ನಿರ್ಧರಿಸಿದ್ದರು. ಆದರೆ ನಿನ್ನೆ ಮುಂಜಾನೆಯೇ ಇಲ್ಲಿಂದ ಕೂಡಾ ಕಳವು ಕೃತ್ಯ ನಡೆದಿದೆ. ರಸ್ತೆಯಿಂದ ಸುಮಾರು 8 ಫೀಟ್ ಆಳದಲ್ಲಿ ಮಂದಿರವಿದ್ದು, ಈ ಕಾಣಿಕೆ ಡಬ್ಬಿಯನ್ನು ಮಂದಿರದ ಮುಂಭಾಗ, ರಸ್ತೆಯಿಂದ ಇಳಿಯುವ ಮೆಟ್ಟಿಲಿಗೆ ಹೊಂದಿಕೊಂಡು ಕಳೆದ ವರ್ಷ ನಿರ್ಮಿಸಿದ್ದರು. ನಿನ್ನೆ ಬೆಳಗ್ಗೆ ಮಂದಿರಕ್ಕೆ ಬಂದ ಪರಿಸರದ ನಿವಾಸಿ ಸಂತೋಷ್ ಎಂಬವರಿಗೆ ಕಾಣಿಕೆ ಡಬ್ಬಿಯ ಮುಚ್ಚುಗೆ ತೆರೆದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಒಳಗೆ ಇಣುಕಿ ನೋಡಿದಾಗ ಹಣ ಕಳವು ನಡೆಸಿದ ಬಗ್ಗೆ ಅರಿವಾಗಿ ಮಂದಿರದ ಅಧ್ಯಕ್ಷ ಪುರುಷೋತ್ತಮ ಪಾವಳರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಸಮಿತಿ ಪದಾಧಿಕಾರಿಗಳು ಮಂಜೇಶ್ವರ ಪೊಲೀಸರಿಗೆ ಕಳವು ನಡೆದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೆ ಮಂದಿರದಿಂದ ಸುಮಾರು 2 ಕಿಲೋ ಮೀಟರ್ ದೂರದಲ್ಲಿರುವ ವರ್ಕಾಡಿ ಪಾಡಿ ಎಂಬಲ್ಲಿ ಸ್ಥಳೀಯ ನಿವಾಸಿ ಬಷೀರ್ ಎಂಬವರ ಮಾಲಕತ್ವದ ರಾಬ ಜನರಲ್ ಸ್ಟೋರ್ ನಲ್ಲಿ ಕೂಡಾ ಕಳವು ನಡೆದಿದೆ. ಶಟರ್ ನ ಬೀಗ ಮುರಿದು ಒಳ ನುಗ್ಗಿದ್ದ ಕಳ್ಳ ಡ್ರವರ್ ನಲ್ಲಿದ್ದ ಸುಮಾರು 16,000 ಬೆಲೆ ಬಾಳುವ ಮೊಬೈಲ್, ಹಾಗೂ 10,000 ಮೊತ್ತವನ್ನು ಕಳ್ಳನು ಎಗರಿಸಿದ್ದಾನೆ. ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ಬಷೀರ್ ದೂರನ್ನು ನೀಡಿದ್ದಾರೆ. ಈ ಮೇಲಿನ ಮೂರು ಕಳವು ಪ್ರಕರಣಗಳು ಓರ್ವ ವ್ಯಕ್ತಿಯಿಂದಲೇ ನಡೆದಿದೆ. ನಿನ್ನೆ ಮುಂಜಾನೆ 12.30 ರಿಂದ 4 ಗಂಟೆಯ ಒಳಗೆ ಕಳವು ನಡೆದಿರಬಹುದು ಎಂದು ಸಿಸಿ ಟೀವಿಯ ಕೆಮರಾವನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಮಾಹಿತಿ ನೀಡಿದ್ದಾರೆ. ಕಳೆದ ಒಂದು ವಾರದ ಹಿಂದೆ ವರ್ಕಾಡಿ ಚರ್ಚ್ ನಲ್ಲಿ ಕೂಡಾ ಕಳವು ನಡೆದಿದ್ದು. ಇಲ್ಲಿ ಓರ್ವ ಕಳ್ಳ ಚರ್ಚ್ ಗೆ ನುಗ್ಗಿ ಕಳವು ನಡೆಸಿದ ಘಟನೆ ನಡೆದಿದ್ದು, ಸಿಸಿ ಟಿವಿಯಲ್ಲಿ ಈ ಬಗ್ಗೆ ಕಂಡು ಬಂದಿದೆ. ಕಳವು ಪ್ರಕರಣಗಳು ಕಳೆದ 3 ತಿಂಗಳ ಒಳಗೆ ವರ್ಕಾಡಿ, ಮೀಂಜ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿದ್ದರೂ ಮಂಜೇಶ್ವರ ಪೊಲೀಸರಿಗೆ ಇದುವರೆಗೆ ಕಳ್ಳನನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇದೀಗ ಊರಿನ ನಾಗರೀಕರು ಭಯಭೀತಿಯಲ್ಲಿ ದಿನ ಕಳೆಯುವಂತಾಗಿದೆ.







