Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ "ವಿಶ್ವಮಾನವ ಸಂದೇಶ" ಸಾರಿದ 92 ನೇ ಸರ್ವಧರ್ಮ ಸಮ್ಮೇಳನ.

ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ "ವಿಶ್ವಮಾನವ ಸಂದೇಶ" ಸಾರಿದ 92 ನೇ ಸರ್ವಧರ್ಮ ಸಮ್ಮೇಳನ.
ಧರ್ಮಸ್ಥಳ: ಭಾರತದ ಸಂವಿಧಾನ ರೂಪುಗೊಳ್ಳುವ ಮುನ್ನವೆ ಸರ್ವಧರ್ಮ ಸಮನ್ವಯದ ತತ್ವಗಳು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಿರೂಪಿಸಲ್ಪಟ್ಟವು ಎಂದು ರಾಜ್ಯದ ಗೃಹ ಸಚಿವ ಡಾ.ಜಿ ಪರಮೇಶ್ವರ ನುಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ನಿನ್ನೆ ಸಂಜೆ ನಡೆದ 92 ನೇ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಎಲ್ಲಾ ಧರ್ಮಗಳು ಭಿನ್ನ ಆಲೋಚನೆಗಳನ್ನು ದಾಟಿಸಿದೆ, ಸೌಹಾರ್ದಯುತ ಮನೋಭಾವನೆಯನ್ನು ಬಿಂಬಿಸಿವೆ ಇದನ್ನು ಅರ್ಥ ಮಾಡಿಕೊಳ್ಳದೆ ಅನಾವಶ್ಯಕವಾಗಿ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವ ಮನಸ್ಥಿತಿ ಇದೆ. ಈ ಮನಸ್ಥಿತಿಯ ಮಿತಿಯಿಂದ ಹೊರಬರುವುದಕ್ಕೆ ಧರ್ಮ ತತ್ವಗಳು ನೆರವಾಗುತ್ತದೆ ಎಂದರು. ಭಾರತದ ಸ್ವಾತಂತ್ರ್ಯಾ ನಂತರ ರೂಪುಗೊಂಡ ಸಂವಿಧಾನವೂ ಕೂಡಾ ಸರ್ವಧರ್ಮ ಸಮನ್ವಯತೆಯ ತತ್ವಗಳನ್ನು ತಿಳಿಸುತ್ತವೆ. ಸಮಾನತೆ, ಭ್ರಾತೃತ್ವ ಮಹತ್ವ ಪೂರ್ಣವಾದ ಅಂಶಗಳನ್ನು ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನವು ಪ್ರತಿನಿಧಿಸುತ್ತದೆ ಎಂದು ತಿಳಿಸಿದರು.
ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನ ರಾಜರಾಜೇಶ್ವರಿ ನಗರ ಬೆಂಗಳೂರಿನ ಶ್ರೀ ಶ್ರೀ ಶ್ರೀ ಜಯೇಂದ್ರ ಪುರಿ ಮಹಾಸ್ವಾಮಿಗಳು ಅಧಿವೇಶನದಲ್ಲಿ ಮಾತನಾಡಿ, ಇಡೀ ವಸುಧೆಯು ನಮ್ಮ ಕುಟುಂಬ ಎಂಬ ಭಾವನೆಯನ್ನು ಮಾನವರು ಹೊಂದಬೇಕು. ಅನಂತಕಾಲದವರೆಗೂ ಉಳಿಯಬಹುದಾದ ಉನ್ನತ ಆಲೋಚನೆಯಗಳೊಂದಿಗೆ ಬದುಕಬೇಕು ಎಂದರು. ಯಾವುದೇ ಧರ್ಮವೂ ಮಾನವರನ್ನು ಮಾನವರಿಂದ ದೂರಮಾಡುವ ಕೆಲಸವನ್ನು ಯಾವತ್ತಿಗೂ ಪ್ರೋತ್ಸಾಹಿಸುವುದಿಲ್ಲ, ಎಲ್ಲಾ ಧರ್ಮಗಳು ಒಂದೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಇಂತಹ ಚಿಂತನೆಗಳು ಸರ್ವಧರ್ಮ ಸಮ್ಮೇಳನವನ್ನು ಯಶಸ್ವಿಯನ್ನಾಗಿಸುತ್ತವೆ ಎಂದು ನುಡಿದರು.
ಪ್ರತೀ ಧರ್ಮದ ಮೂಲ ಉದ್ದೇಶ ಮನುಕುಲದಲ್ಲಿ ಸಭ್ಯತೆಯನ್ನು ಕಲಿಸುವುದಾಗಿದೆ, ಅಹಿಂಸಾತ್ಮಕ ಜೀವನವನ್ನು ನಡೆಸುವ ಮಾರ್ಗವನ್ನು ತಿಳಿಸುವ ಮೂಲ ಉದ್ದೇಶವನ್ನು ಧರ್ಮಗಳು ಹೊಂದಿದೆ ಎಂದು ಉಪನ್ಯಾಸಕ ಸಂಶೋಧಕರು ಮತ್ತು ಸಂವಹನಕಾರರಾದ ಡಾ. ಜಿ.ಬಿ ಹರೀಶ ಸಮ್ಮೇಳನದ ಉಪನ್ಯಾಸಕರಾಗಿ ಮಾತನಾಡಿದರು. ದಯವಿಲ್ಲದ ಧರ್ಮವು ಜಗತ್ತಿನಲ್ಲಿ ಇರುವುದಿಲ್ಲ ಸಕಲರನ್ನು ಸಲಹಲು ದಯೆಯೆ ಮುಖ್ಯವಾಗಿದೆ. ಪ್ರೀತಿ, ಕರುಣೆ, ದಯೆ ಇವುಗಳು ಧರ್ಮದ ಮೂಲ ಉದ್ದೇಶವಾಗಿ ಗುರುತಿಸಿಕೊಳ್ಳುತ್ತದೆ ಎಂದು ಸಮ್ಮೇಳನದ ಉಪನ್ಯಾಸಕಕಾರ ಮಡಂತ್ಯಾರಿನ ನಿವೃತ್ತ ಪ್ರಾಂಶುಪಾಲ ಡಾ.ಜೋಸೆಫ್,ಎನ್.ಎಮ್ ಮಾತನಾಡಿದರು. ಮಾನವನು ಸ್ವ ಧರ್ಮದ ಚೌಕಟ್ಟಿನಲ್ಲಿದ್ದು ಪರಧರ್ಮವನ್ನು ಗೌರವಿಸಬೇಕು ಅದು ಭಾವೈಕ್ಯತೆ ಎಂದು ನುಡಿದು ತತ್ವಪದಗಳಲ್ಲಿ ಜೀವನ ದರ್ಶನ ಎಂಬ ವಿಷಯದ ಕುರಿತ ಉಪನ್ಯಾಸವನ್ನು ರಾಷ್ಟ್ರೀಯ ಬಸವ ಭೂಷಣ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮೆಹತಾಬ ಇಬ್ರಾಹಿಮ್ ಸಾಬ ಕಾಗವಾಡ ಮಾಡಿದರು. ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಪ್ರಾಸ್ತಾವಿಕ ಮಾತನಾಡುತ್ತಾ ಮಾನವರು ಧರ್ಮದಲ್ಲಿ ವಿಶಾಲ ಅರ್ಥವನ್ನು ಕಾಣುವ ಮನಸ್ಥಿತಿಯನ್ನು ಹೊಂದಿದ್ದರೆ ಧರ್ಮದಲ್ಲಾಗುವ ಸಂಘರ್ಷಗಳನ್ನು ತಪ್ಪಿಸಲು ಸಾಧ್ಯ ಇದರಿಂದಾಗಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬಹುದು ಎಂದು ತಿಳಿಸಿದರು. ಚತುರ್ದಾನಗಳಲ್ಲಿ ಒಂದಾದ ಔಷಧದಾನದಲ್ಲಿ ವಿಶೇಷವಾಗಿ ಇದೇ ಹೊಸ ವರ್ಷ ಜನವರಿಯಿಂದ ಅಗತ್ಯವಿರುವವರಿಗೆ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸಾ ಸೇವೆಯನ್ನು ನೀಡುವುದಾಗಿ ತಿಳಿಸಿದರು. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮುಖ್ಯ ತೀರ್ಪುಗಾರ ಡಾ.ಪ್ರದೀಪ್ ಭಾರದ್ವಾಜ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು, ಉದ್ಘಾಟಕರ ಸಮ್ಮಾನ ಪತ್ರವನ್ನು ಕ್ಷೇಮವನ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರದ್ಧಾ ಅಮಿತ್ ಗೌರವ ವಾಚಿಸಿದರು. ಅಧ್ಯಕ್ಷರ ಸನ್ಮಾನ ಪ್ರಮಾಣ ಪತ್ರವನ್ನು ಉಜಿರೆಯ ಎಸ್.ಡಿ.ಎಂ ಸನಿವಾಸ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ವಾಚಿಸಿದರು. ಕಾರ್ಯಕ್ರಮವನ್ನು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ.ಶ್ರೀಧರ ಭಟ್ ನಿರ್ವಹಿಸಿದರು. ಉಜಿರೆ ರೂಡ್ ಸೆಟ್ ನಿರ್ದೇಶಕ ಅಜಯ್ ವಂದಿಸಿದರು. ಶ್ರೀವಿದ್ಯಾ ಐತಾಳ ಪ್ರಾರ್ಥಿಸಿದರು. ಹೆಗ್ಗಡೆಯವರಿಗೆ ಇಂಡಿಯಾ ಬುಕ್ ಆಪ್ ರೆಕಾರ್ಡ ಪ್ರಮಾಣ ಪತ್ರ ಹಸ್ತಾಂತರ.
ಇಂಡಿಯಾ ಬುಕ್ ಆಫ್ ರೆಕಾರ್ಡ ಗೌರವವನ್ನು ಪಡೆದ ಮಂಜುಷಾ ವಸ್ತುಸಂಗ್ರಹಾಲಯದ ಮಹತ್ವವನ್ನು ಸಾರುವ ವೀಡಿಯೋ ಪ್ರದರ್ಶಿಸಲಾಯಿತು. ವಸ್ತುಪ್ರದರ್ಶನದ ಕ್ಯುರೇಟರ್ ಪುಷ್ಪದಂತ ಅವರು ವಸ್ತು ಸಂಗ್ರಹಾಲಯದ ವಿಶೇಷತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಮಂಜುಷಾ ವಸ್ತುಸಂಗ್ರಹಾಲಯಕ್ಕೆ ದೊರೆತ ಇಂಡಿಯಾ ಬುಕ್ ಆಫ್ ರೆಕಾಡ, ೯ ಪ್ರಮಾಣ ಪತ್ರವನ್ನು ಈ ಸಂದರ್ಭದಲ್ಲಿ ಹೆಗಡೆಯವರಿಗೆ ಹಸ್ತಾಂತರಿಸಲಾಯಿತು.
ಕ್ಷೇತ್ರದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದ ನಾಲ್ಕನೇ ದಿನವಾದ ನಿನ್ನೆ ರಾತ್ರಿ ಕಂಚಿಮಾರು ಕಟ್ಟೆ ಉತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು. ದೇವಸ್ಥಾನದ ಒಳಗಡೆ ಶ್ರೀ ಮಂಜುನಾಥನಿಗೆ ಪೂಜೆ ಸಲ್ಲಿಸಿ ಉತ್ಸವಮೂರ್ತಿಯೊಂದಿಗೆ 5 ಸುತ್ತಿನ ಪ್ರದಕ್ಷಿಣೆ ಬರಲಾಯಿತು. ಬಳಿಕ ಕ್ಷೇತ್ರಪಾಲಕನಿಗೆ ಪೂಜೆ ಸಲ್ಲಿಸಿ
ಉತ್ಸವಮೂರ್ತಿಯನ್ನು ಸ್ವರ್ಣ ಪಲ್ಲಕ್ಕಿಯಲ್ಲಿ ಕುಳ್ಳಿರಿಸಲಾಯಿತು. ಶಂಖ, ಜಾಗಟೆ, ಡೋಲು, ಸಂಗೀತ ಸೇವೆಯೊಂದಿಗೆ ಪಲ್ಲಕ್ಕಿಯಲ್ಲಿ 11 ಸುತ್ತುಗಳ ಪ್ರದಕ್ಷಣೆ ಬರಲಾಯಿತು. ದೇವಸ್ಥಾನದ ಒಳಾಂಗಣವನ್ನು ಹೂವು - ಹಣ್ಣುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.
ದೇವಸ್ಥಾನದ ಒಳಗಡೆ ವೈದಿಕ ಕ್ರಮಗಳನ್ನು ನಡೆಸಿದ ನಂತರ ಉತ್ಸವಮೂರ್ತಿಯನ್ನು ಹೊರಾಂಗಣಕ್ಕೆ ಕರೆತರಲಾಯಿತು. ಸರ್ವಾಲಂಕೃತಗೊಂಡಿದ್ದ ಬೆಳ್ಳಿಯ ನಂದಿಯ ಲಾಲಕ್ಕಿಯಲ್ಲಿ ಉತ್ಸವಮೂರ್ತಿಯನ್ನು ವಿರಾಜಮಾನಗೊಳಿಸಿ ಕಂಚಿಮಾರು ಕಟ್ಟೆಗೆ ಕರೆತರಲಾಯಿತು. ಪಂಜು, ವಿವಿಧ ವಾದ್ಯಗಳು ಮತ್ತು ಭಕ್ತರ ಉದ್ವೇಷದೊಂದಿಗೆ ಮೆರವಣಿಗೆ ಸಾಗಿ ಬಂದಿತು. ದೇವಸ್ಥಾನದ ಆನೆಗಳಾದ ಲಕ್ಷ್ಮಿ ಮತ್ತು ಶಿವಾನಿ ಉತ್ಸಾಹದಿಂದ ಹೆಜ್ಜೆ ಹಾಕಿದವು. ಕಂಚಿಮಾರು ಕಟ್ಟೆಯಲ್ಲು ಶ್ರೀ ಮಂಜುನಾಥನಿಗೆ ಪಂಚವಾದ್ಯಗಳ ಸೇವೆ ಸಲ್ಲಿಸಿ ಪೂಜಿಸಲಾಯಿತು. ಬಳಿಕ ದೇವಸ್ಥಾನದ ಮುಂಭಾಗದಲ್ಲಿ ಬೆಳ್ಳಿರಥದಲ್ಲಿ ಕೂರಿಸಿ ಮಂಗಳಾರಾತಿ ಮಾಡಲಾಯಿತು. ನೆರೆದಿದ್ದ ಸಾವಿರಾರು ಭಕ್ತರು ಭಕ್ತಿ ಪರವಶರಾಗಿ ಮಂಜುನಾಥನ ನಾಮ ಜಪಿಸುತ್ತ ರಥ ಎಳೆದರು. ಉತ್ಸವಮೂರ್ತಿ ದೇವಸ್ಥಾನದ ಒಳ ಪ್ರವೇಶಿಸುವಲ್ಲಿಗೆ ಉತ್ಸವ ಸಂಪನ್ನಗೊಳಿಸಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.