ಮಂಜೇಶ್ವರ ಸರ್ವೀಸ್ ಕೋ - ಓಪರೇಟಿವ್ ಬ್ಯಾಂಕ್ ನ ವಾರ್ಷಿಕ ಮಹಾಸಭೆ. 61.64 ಲ.ರೂ ಲಾಭ, ಸದಸ್ಯರಿಗೆ ಶೇ.11 ಡಿವಿಡೆಂಡ್.
ಅಕ್ಟೋಬರ್ 01, 2024
0
ಮಂಜೇಶ್ವರ ಸರ್ವೀಸ್ ಕೋ - ಓಪರೇಟಿವ್ ಬ್ಯಾಂಕ್ ನ ವಾರ್ಷಿಕ ಮಹಾಸಭೆ. 61.64 ಲ.ರೂ ಲಾಭ, ಸದಸ್ಯರಿಗೆ ಶೇ.11 ಡಿವಿಡೆಂಡ್.
ಮಂಜೇಶ್ವರ: ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಪ್ರಸಕ್ತ 153.19 ಕೋ.ರೂ ಠೇವಣಿ, 2.88 ಕೋ.ರೂ ಪಾಲು ಬಂಡವಾಳ, 126.85 ಕೋ.ರೂ ಸಾಲಗಳು, 51.99 ಕೋ. ರೂ ಹೂಡಿಕೆಗಳು ಇದ್ದು ಬ್ಯಾಂಕ್ ಪ್ರಗತಿಯತ್ತ ಸಾಗುತ್ತಿದ್ದು, 2023 - 24 ನೇ ಸಾಲಿನಲ್ಲಿ 400 ಕೋ.ರೂ ಗಳಿಗೂ ಮೀರಿ ವ್ಯವಹಾರ ನಡೆಸಿ 61.64 ಲಕ್ಷ ರೂ.ನಿವ್ವಳ ಲಾಭಗಳಿಸಿದೆ. ಬ್ಯಾಂಕ್ ಈವರೆಗೂ ಲೆಕ್ಕಪರಿಶೋಧನೆಯಲ್ಲಿ 'ಎ' ಗ್ರೇಡ್ ಮಾನ್ಯತೆ ಪಡೆಯುತ್ತಲೇ ಬಂದಿದೆ. ಸದಸ್ಯರಿಗೆ ಶೇ.11 ಡಿವಿಡೆಂಡ್ ಘೋಷಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಸ್ ರಾಮಚಂದ್ರರವರು ತಿಳಿಸಿದರು. ಮಂಜೇಶ್ವರ ಎಸ್. ಎ. ಟಿ ಶಾಲೆಯ ಅನಂತ ವಿದ್ಯಾಲಯದಲ್ಲಿ ನಡೆದ ಬ್ಯಾಂಕಿನ 84 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿ ಬ್ಯಾಂಕ್ ಸ್ಥಾಪನೆಯಾದ ಇಷ್ಟು ವರ್ಷಗಳಲ್ಲಿ ಸಾಧಿಸಿದ ಪ್ರಗತಿಗೆ ಸಹಕರಿಸಿದ ಬ್ಯಾಂಕಿನ ಠೇವಣಿದಾರರು, ಸದಸ್ಯರು, ಗ್ರಾಹಕ ಬಂಧುಗಳು, ಸಿಬ್ಬಂದಿಗಳು, ಕಮಿಷನ್ ಏಜೆಂಟ್‌ದಾರರ ಕಾರ್ಯ ಶ್ಲಾಘನೀಯ ಎಂದರು. ಬ್ಯಾಂಕಿನ ಕಾರ್ಯದರ್ಶಿ ರಾಜನ್ ನಾಯರ್ ಪಿ. ಯವರು 2023 - 24 ನೇ ಸಾಲಿನ ಲೆಕ್ಕಪತ್ರ ಮತ್ತು 2025 - 26 ನೇ ಸಾಲಿನ ಅಂದಾಜು ಬಜೆಟ್ ಸೇರಿದಂತೆ ಬ್ಯಾಂಕಿನ ವಿವಿಧ ಕಾರ್ಯ ಚಟುವಟಿಕೆಯನ್ನು ಸಭೆಯಲ್ಲಿ ಮಂಡಿಸಿದರು. ಪಂಚಾಯತ್ ಮಟ್ಟದಲ್ಲಿ 2023 - 24 ನೇ ವರ್ಷದಲ್ಲಿ ಎಲ್ಲಾ ವಿಷಯದಲ್ಲಿ ಎ ಪ್ಲಸ್ ಪಡೆದ ಒಟ್ಟು 14 ಎಸ್ ಎಸ್ ಎಲ್ ಸಿ ಹಾಗೂ ಪ್ಲಸ್ ಟು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬ್ಯಾಂಕ್ ಠೇವಣಾತಿಗಳಿಗೆ ಅತ್ಯಾಕರ್ಷಕ ಬಡ್ಡಿ ನೀಡುತ್ತಿದ್ದು, ಹಿರಿಯ ನಾಗರಿಕರಿಗೆ ಶೇ.0.5 ರಷ್ಟು ಹೆಚ್ಚುವರಿ ಬಡ್ಡಿ ನೀಡುತ್ತಿದೆ. ಬ್ಯಾಂಕ್ ತನ್ನ 6 ಶಾಖೆಗಳ ಮುಖಾಂತರ ಸಮಾಜದಲ್ಲಿನ ಹಿಂದುಳಿದ ಮತ್ತು ದುರ್ಬಲ ವರ್ಗದ ಜನ ಸಮೂಹಕ್ಕೆ ಆರ್ಥಿಕ ನೆರವು ಮತ್ತು ವಿವಿಧ ಬಗೆಯ ಬ್ಯಾಂಕಿಂಗ್ ಸೌಲಭ್ಯವನ್ನು ನೀಡುತ್ತಿದೆ. ಉಪಾಧ್ಯಕ್ಷರಾದ ವಿಜಯ ಕೆ, ನಿರ್ದೇಶಕರಾದ ಡಾ.ಕೆ.ಎ ಖಾದರ್, ಯತೀಶ ಕೆ, ಗಣೇಶ್ ಸಿ.ಹೆಚ್, ರಾಮಚ0ದ್ರ ಕೆ, ಗಂಗಾಧರ ಕೆ, ಕೆ .ಶ್ರೀಮತಿ ರೇಖಾ, ಶ್ರೀಮತಿ ಸೇಸಮ್ಮ ಮತ್ತು ಶ್ರೀಮತಿ ನಾರಾಯಣಿ ಉಪಸ್ಥಿತರಿದ್ದರು. ಸಭೆಯಲ್ಲಿ ಕಳೆದ ವರ್ಷ ಅಗಲಿದ ಬ್ಯಾಂಕಿನ ಮಾಜಿ ಅಧ್ಯಕ್ಷರುಗಳಾದ ದಿ.ಬಿ ವಿ ರಾಜಗೋಪಾಲರವರಿಗೂ ಹಾಗೂ ದಿ. ಬಿ.ಎಂ ಅನಂತರವರಿಗೂ ಹಾಗೂ ಇತರ ಸದಸ್ಯರಿಗೂ ಶ್ರದ್ಧಾಂಜಲಿ ಅರ್ಪಿಸಲಾಯಿತು. ಉಪಾಧ್ಯಕ್ಷರಾದ ವಿಜಯ ಕೆ. ಯವರು ವಂದಿಸಿದರು.



