ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್ ನ ಪ್ರಧಾನ ಕಚೇರಿಗೆ ನುಗ್ಗಿದ ಕಳ್ಳರು.
ಆಗಸ್ಟ್ 25, 2024
0
ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್ ನ ಪ್ರಧಾನ ಕಚೇರಿಗೆ ನುಗ್ಗಿದ ಕಳ್ಳರು.
ಮಂಜೇಶ್ವರ: ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್ ನ ಪ್ರಧಾನ ಕಚೇರಿಗೆ ಕಳ್ಳರು ನುಗ್ಗಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಆದರೆ ಯಾವುದೇ ಸೊತ್ತುಗಳು ಕಳವುಗೀಡಾಗಿಲ್ಲ. ಘಟನೆ ಇವತ್ತು ಬೆಳಗ್ಗೆ ಬೆಳಕಿಗೆ ಬಂದಿದೆ. ವರ್ಕಾಡಿ ಗ್ರಾಮ ಪಂಚಾಯತ್ ಗೊಳಪಟ್ಟ ದೈಗೋಳಿ ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯ ಮುಂಭಾಗದ ಪೊಯ್ಯತ್ತಬೈಲ್ ಗೆ ತೆರಳುವ ರಸ್ತೆಯ ಪಕ್ಕವೇ ಕಟ್ಟಡದ ಮೇಲ್ಭಾಗದಲ್ಲಿ ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್ ಕಾರ್ಯಾಚರಿಸುತ್ತಿದೆ. ಇಂದು ಬೆಳಗ್ಗೆ 7 ಗಂಟೆ ವೇಳೆ ಬ್ಯಾಂಕ್ ನ ಶಟರ್ ತೆರೆದ ಸ್ಥಿತಿಯಲ್ಲಿ ಕಂಡು ಬಂದ ಕಾರಣ ಪರಿಸರ ನಿವಾಸಿಗಳು ಬ್ಯಾಂಕ್ ಕಾರ್ಯದರ್ಶಿ ಜಯರಾಮ ಎನ್.ಕೆ ಯವರಿಗೆ ಮಾಹಿತಿ ನೀಡಿದ್ದು, ಕೂಡಲೇ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಸಮ್ಮುಖದಲ್ಲಿ ಆಡಳಿತ ವರ್ಗ ಬ್ಯಾಂಕ್ ಗೆ ಆಗಮಿಸಿ, ಪರಿಶೀಲಿಸಿದಾಗ ಬ್ಯಾಂಕ್ ನ ಶಟರ್ ಮುರಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಒಳಗೆ ನೋಡಿದಾಗ ಸಿ.ಸಿ ಟಿವಿ ಹಾಗೂ ಸೈರನ್ ನ ವಯರ್ ಗಳು ತುಂಡರಿಸಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಅಲ್ಲದೆ ಬ್ಯಾಂಕ್ ಕಾರ್ಯದರ್ಶಿ ಕುಳಿತುಕೊಳ್ಳುವ ಟೇಬಲ್ ನ ಡ್ರವರ್ ಎಳೆದು ಕಡತಗಳನ್ನು ಚೆಲ್ಲಾಪಿಲ್ಲಿ ಗೊಳಿಸಿದ ಸ್ಥಿತಿಯಲ್ಲಿ ಕಂಡುಬಂದಿವೆ. ಬ್ಯಾಂಕ್ ನ ಚಿನ್ನ ಹಾಗೂ ಹಣ ಇಡುವ ಲಾಕರ್ ಗಳನ್ನು ತೆರೆಯಲು ಕಳ್ಳರಿಗೆ ಸಾಧ್ಯವಾಗಿಲ್ಲ. ಒಳನುಗ್ಗಿದ ಕಳ್ಳರು ಏನು ಮಾಡೋಕಾಗದೆ ಹಿಂತಿರುಗಿರಬಹುದೆಂದು ಅಂದಾಜಿಸಲಾಗಿದೆ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರಿಗೆ ಬ್ಯಾಂಕ್ ನ ಆಡಳಿತ ಮಂಡಳಿ ದೂರು ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮುಂದಿನ ತನಿಖೆಗೆ ಫಾರೆನ್ಸಿಕ್ ತಜ್ಞರು ಆಗಮಿಸಲಿದ್ದಾರೆ.












