"ಕೇರಳ ತುಳು ಅಕಾಡೆಮಿ ವತಿಯಿಂದ ಸ್ನೇಹಾಲಯದಲ್ಲಿ "ಆಟಿದ ಅಟ್ಟನೆ" ಆಚರಣೆ.
ಆಗಸ್ಟ್ 13, 2024
0
"ಕೇರಳ ತುಳು ಅಕಾಡೆಮಿ ವತಿಯಿಂದ ಸ್ನೇಹಾಲಯದಲ್ಲಿ "ಆಟಿದ ಅಟ್ಟನೆ" ಆಚರಣೆ ಶ್ಲಾಘನೀಯ, ಆಟಿ ತಿಂಗಳ, ಆಟಿ ಕಲಂಜದ ಮಹತ್ವವನ್ನು ಬಾಲ್ಯದಲ್ಲಿ ಅಮ್ಮನಿಂದ ಕಲಿತೆ." - ಸ್ನೇಹಾಲಯದಲ್ಲಿ ತುಳು ಅಕಾಡೆಮಿ ಕಾರ್ಯಕ್ರಮ. "ಆಟಿಯ ಅಟ್ಟಣೆ"ಯನ್ನು ಉದ್ಘಾಟಿಸಿ, ಬಾಲ್ಯದ ದಿನವನ್ನು ನೆನಪಿಸಿದ ಮಂಜೇಶ್ವರ ಶಾಸಕ.
ಮಂಜೇಶ್ವರ: ಮಂಜೇಶ್ವರ ಸ್ನೇಹಾಲಯದಲ್ಲಿ ಕೇರಳ ತುಳು ಅಕಾಡೆಮಿಯ ವತಿಯಿಂದ "ಆಟಿದ ಅಟ್ಟನೆ" ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕರಾದ AKM ಅಶ್ರಫ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು "ಸಮಾಜಕ್ಕೆ ಮಾನವೀಯತೆ ಸಂದೇಶ ಸಾರುವ ಸ್ನೇಹಾಲಯದಲ್ಲಿ ನಡೆದ ಈ ಆಟಿದ ಅಟ್ಟಣೆ ಕಾರ್ಯಕ್ರಮ ನಿಜವಾಗಿಯೂ ಅಭಿನಂದನಾರ್ಹ". ಸಮಾಜದಲ್ಲಿ ರೋಗರುಜಿನಗಳನ್ನು ಇಲ್ಲವಾಗಿಸುವಲ್ಲಿ ಆಟಿ ಕಲಂಜದ ಮಹಿಮೆಯ ಬಗ್ಗೆ ಬಾಲ್ಯದಲ್ಲಿ ಅಮ್ಮ ಹೇಳಿದ ನೆನಪು ಈಗಲೂ ಹೊಚ್ಚ ಹೊಸದಾಗಿದೆ ಎಂದು ತನ್ನ ಬಾಲ್ಯದ ದಿನಗಳನ್ನು ನೆನೆದರು. ತುಳು ಭಾಷೆ ಸಂಸ್ಕೃತಿಯನ್ನು ಬೆಳೆಸುವಲ್ಲಿ ಅಕಾಡೆಮಿ ಇನ್ನಷ್ಟು ಶ್ರಮಿಸಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಸರಗೋಡು ಜಿಲ್ಲಾಧಿಕಾರಿ ಇಂಬಸೇಖರ IAS ಮಾತನಾಡಿ ಲೋಕದೆಲ್ಲೆಡೆ ಇರುವ ತುಳುವರನ್ನು ಒಗ್ಗೂಡಿಸಿ ಜಿಲ್ಲೆಯಲ್ಲಿ ದೊಡ್ಡ ಕಾರ್ಯಕ್ರಮ ಮಾಡೋಣ ಎಂದರು. ಕಾರ್ಯಕ್ರಮವನ್ನು ಕೊಡುಗೈ ದಾನಿ, ಸದಾಶಿವ ಶೆಟ್ಟಿ ಕುಳೂರು ಕನ್ಯಾನ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿ ಅವರು "ತುಳು ಭಾಷೆ ಸಂಸ್ಕೃತಿಯನ್ನು ಉಳಿಸುವಲ್ಲಿ ತುಳು ಅಕಾಡೆಮಿಯ ಪಾತ್ರ ಬಲು ದೊಡ್ಡದು, ಮುಂದಿನ ಗುರಿಯಾದ ರಾಷ್ಟ್ರೀಯ ತುಳು ಉತ್ಸವ ಮುಂತಾದ ವೈವಿದ್ಯ ಮಯ ತುಳು ಕಾರ್ಯಕ್ರಮಗಳನ್ನು ಸಂಘಟಿಸುವಾಗ ತಾನು ಸಂಪೂರ್ಣ ಬೆಂಬಲ ನೀಡುವೆನೆಂದರು. ನಮ್ಮ ತುಳುನಾಡಿನ ಸಂಸ್ಕೃತಿ ಜಗತ್ತಿಗೆ ಮಾದರಿ ಎಂದರು. ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪ್ಪಾಡರವರು ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ ಹಿಂದಿನ ತುಳು ಸಂಪ್ರದಾಯವನ್ನು ಉಳಿಸುವಲ್ಲಿ ಅಕಾಡೆಮಿ ಕಾರ್ಯಕ್ಕೆ ದೇವರ ಆಶೀರ್ವಾದ ಸದಾ ಇದೆ ಎಂದರು ಮತ್ತು ತುಳು ಜನರ ಎಲ್ಲಾ ರೋಗ ರುಜಿನಗಳು ದೂರವಾಗಲಿ ಎಂದರು. ನ್ಯಾ. ಸುಬ್ಬಯ್ಯ ರೈ ಮಾತನಾಡಿ ಕೇರಳ ರಾಜ್ಯದೆಲ್ಲೆಡೆ ತುಳು ಜನರು ವಾಸಿಸಿ ತುಳು ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ. ಕೇರಳದ ಹೆಚ್ಚಿನ ಕಡೆಗಳಲ್ಲಿರುವ ದೇವಸ್ಥಾನಗಳಲ್ಲಿ ತುಳು ಅರ್ಚಕರಿರುವುದು ನಮಗೆಲ್ಲ ಹೆಮ್ಮೆ ಎಂದರು. ಈ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭವನ್ನು ವರ್ಕಾಡಿ ಬೋಳ ಚರ್ಚ್ ನ ವಂದನೀಯ ಫಾದರ್ ರೇ. ಮೈಕಲ್ ಉದ್ಘಾಟಿಸಿದರು. ಅವರು ಮಾತನಾಡಿ ಹಿಂದಿನ ಕಾಲದಲ್ಲಿ ಎಷ್ಟೇ ಸಿರಿವಂತರಾದರೂ ಬಡವರಾದರೂ ಆಟಿ ತಿಂಗಳಲ್ಲಿ ಕಷ್ಟ ಅನುಭವಿಸುತ್ತಿದ್ದರು ಎಂದರು. ತುಳು ರಸಭರಿತ ಭಾಷೆ, ನಮಗೆ ಇದು ಭಾಷೆ ಮಾತ್ರ ಅಲ್ಲ ನಮ್ಮ ಬದುಕು ಎಂದರು. ತುಳು ಭಾಷೆಗೆ ರಾಜಶ್ರಯ ಅಗತ್ಯ ಇಲ್ಲ, ಯಾಕಂದ್ರೆ ಇದಕ್ಕೆ ಹೃದಯಾಶ್ರಯ ಇದೆ ಎಂದರು. ತುಳು ಸಂಸ್ಕೃತಿಯನ್ನು ಇನ್ನಷ್ಟು ಬೆಳೆಸುವ ಎಂದರು. ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್. ಶೆಟ್ಟಿ ಸ್ನೇಹಾಲಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಟಿ ತಿಂಗಳಲ್ಲಿ ಎಲ್ಲಾ ಧರ್ಮದ ಭಾಂದವರು ಸೇರಿ ಹಂಚಿ ತಿನ್ನುವ ಸಂಪ್ರದಾಯ ಬಹಳ ಹಿಂದಿನಿಂದಲೂ ಇದೆ ಎಂದರು. ಆಟಿ ತಿಂಗಳು ತಿನ್ನುವ ವಿಶೇಷ ತಿನಸುಗಳು ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತವೆ ಎಂದರು. ತುಳು ಅಕಾಡೆಮಿ ಮಾಜಿ ಅಧ್ಯಕ್ಷರಾದ ಪ್ರಸ್ತುತ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಶ್ರೀ ಉಮೇಶ್ ಸಾಲಿಯಾನ್ ರವರು ಮಾತನಾಡಿ ಸ್ನೇಹಾಲಯದಲ್ಲಿರುವ ಎಲ್ಲಾ ಅಣ್ಣ, ತಮ್ಮ, ಅಕ್ಕ, ತಂಗಿಯವರು ತುಂಬಾ ಸಂತಸಪಟ್ಟ ಈ ಕಾರ್ಯಕ್ರಮ ನಿಜವಾಗಿಯೂ ಮನಸ್ಸಿಗೆ ಸಂತಸ ಕೊಟ್ಟಿದೆ ಎಂದರು. ಜಾತಿ, ಭೇದ, ಮತ ಧರ್ಮತೀತವಾಗಿ ಎಲ್ಲಾ ತುಳುವರನ್ನು ಒಗ್ಗೂಡಿಸುವ ಕನಸು ಹೊತ್ತ ಅಕಾಡೆಮಿ ಅದರಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು. ರಘು ಶೆಟ್ಟಿ, ರಾಮಚಂದ್ರ, ಅಶ್ರಫ್ ಕುಂಜತ್ತೂರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಂಜೇಶ್ವರ ಆಕಾಡೆಮಿ ಅಧ್ಯಕ್ಷರಾದ ಕೆ.ಆರ್ ಜಯಾನಂದರವರು ಮಾತನಾಡಿ ಕೇರಳ ತುಳು ಅಕಾಡೆಮಿ ತುಳು ಭಾಷೆ ಸಂಸ್ಕೃತಿಯನ್ನು ರಕ್ಷಿಸಲು ಕಠಿ ಭದ್ದವಾಗಿದೆ ಎಂದರು. ಸ್ನೇಹಾಲಯದಲ್ಲಿ ನಡೆದ ನಮ್ಮ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರೋತ್ಸಹಿಸಿದ, ಹಾರೈಸಿದ, ಆಶೀರ್ವದಿಸಿದ ಎಲ್ಲರಿಗೂ ನಾವು ಚಿರಋಣಿ ಎಂದರು. ಮುಂದೆಯೂ ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರದಿಂದ ಅಕಾಡೆಮಿ ವತಿಯಿಂದ ಇನ್ನಷ್ಟು ತುಳು ಕಾರ್ಯಕ್ರಮವನ್ನು ಸಂಘಟಿಸುವ ಭರವಸೆ ಯನ್ನು ನೀಡಿದರು. ಸಮಾರೋಪ ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರಾದ ಅಡ್ವೋಕೇಟ್ ಚಂದ್ರಮೋಹನ್ ಸ್ವಾಗತಿಸಿ, ಅಜಿತ್ ಎಮ್. ಸಿ ಲಾಲ್ ಬಾಗ್ ವಂದಿಸಿದರು. ಸದಸ್ಯರಾದ ಉದಯ ಸಾರಂಗ್ ಕಾರ್ಯಕ್ರಮವನ್ನು ನಿರೂಪಿಸಿದರು.













