ಮಂಜೇಶ್ವರದಲ್ಲಿ ಯಾತ್ರಿಕರ ಅವಶ್ಯಕತೆಗಾಗಿ "ಮಾವೇಲಿ ಎಕ್ಸ್ ಪ್ರೆಸ್" ಹಾಗೂ "ಕಣ್ಣೂರು ಎಕ್ಸ್ ಪ್ರೆಸ್" ರೈಲು ನಿಲುಗಡೆಗೊಳಿಸಬೇಕೆಂದು ಆಗ್ರಹಿಸಿ ಮಂಜೇಶ್ವರದ ಗೌಡ ಸಾರಸ್ವತ ಬ್ರಾಹ್ಮಣ (ಜಿ.ಎಸ್.ಬಿ) ಸಂಘದಿಂದ ರೈಲ್ವೇ ಸಚಿವರಿಗೆ ಮನವಿ.
ಜುಲೈ 18, 2024
0
ಮಂಜೇಶ್ವರದಲ್ಲಿ ಯಾತ್ರಿಕರ ಅವಶ್ಯಕತೆಗಾಗಿ "ಮಾವೇಲಿ ಎಕ್ಸ್ ಪ್ರೆಸ್" ಹಾಗೂ "ಕಣ್ಣೂರು ಎಕ್ಸ್ ಪ್ರೆಸ್" ರೈಲು ನಿಲುಗಡೆಗೊಳಿಸಬೇಕೆಂದು ಆಗ್ರಹಿಸಿ ಮಂಜೇಶ್ವರದ ಗೌಡ ಸಾರಸ್ವತ ಬ್ರಾಹ್ಮಣ (ಜಿ.ಎಸ್.ಬಿ) ಸಂಘದಿಂದ ರೈಲ್ವೇ ಸಚಿವರಿಗೆ ಮನವಿ.
ಮಂಜೇಶ್ವರ: ಕೇರಳ - ಕರ್ನಾಟಕ ಸಂಗಮ ಕ್ಷೇತ್ರವಾದ ಗಡಿನಾಡಿನ ತುತ್ತ ತುದಿಯಲ್ಲಿರುವ ಮಂಜೇಶ್ವರದ ರೈಲು ನಿಲ್ದಾಣದಲ್ಲಿ ಮಾವೇಲಿ ಎಕ್ಸ್ ಪ್ರೆಸ್ ಹಾಗೂ ಕಣ್ಣೂರು ಎಕ್ಸ್ ಪ್ರೆಸ್ ರೈಲು ನಿಲುಗಡೆಗೊಳಿಸಬೇಕೆಂದು ಮಂಜೇಶ್ವರದ ಗೌಡ ಸಾರಸ್ವತ ಬ್ರಾಹ್ಮಣ (ಜಿ.ಎಸ್.ಬಿ) ಸಂಘದ ನಿಯೋಗ ರೈಲ್ವೇ ಸಚಿವ ವಿ. ಸೋಮಣ್ಣರವರನ್ನ ಮಂಗಳೂರಿನ ಅಥಿತಿ ಗೃಹದಲ್ಲಿ ಭೇಟಿಯಾಗಿ ಮನವಿ ನೀಡಿ, ಮಾತುಕತೆ ನಡೆಸಿದ್ದಾರೆ. ಕೂಡಲೇ ಈ ಕಾರ್ಯವನ್ನ ಮಾಡಿ, ಮಂಜೇಶ್ವರದ ಜನತೆಯ, ಹಾಗೂ ನಿತ್ಯ ರೈಲು ಪ್ರಯಾಣಿಕರ ಬಹುಕಾಲದ ಕನಸನ್ನ ನನಸು ಮಾಡಬೇಕೆಂದು ಭಿನ್ನವಿಸಿಕೊಂಡಿದ್ದಾರೆ. ಅವರು ನೀಡಿದ ಮನವಿಯಲ್ಲಿ "ಮಂಜೇಶ್ವರವು ಕನ್ನಡದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈಯವರ ಹುಟ್ಟೂರು. ಅವರ ಸ್ಮಾರಕ ಮನೆ ಮತ್ತು ಸರಕಾರಿ ಕಾಲೇಜು ಕೂಡಾ ಇಲ್ಲಿದೆ. ಕನ್ನಡ ಮೂಲ ಭಾಷೆಯ ಗಡಿನಾಡು ಇದಾಗಿದ್ದು, ಇಲ್ಲಿಯ ಜನತೆ ವಿದ್ಯಾಭ್ಯಾಸಕ್ಕೆ, ಉದ್ಯೋಗಕ್ಕೆ ಹಾಗೂ ಆಸ್ಪತ್ರೆಗಳಿಗೆ ಸಂಪೂರ್ಣವಾಗಿ ಮಂಗಳೂರನ್ನೇ ಅವಲಂಬಿಸಿದ್ದು, ನಿತ್ಯ ರೈಲು ಸಂಚಾರಿಗರ ಸಂಖ್ಯೆ ಸಾವಿರಾರಾಗಿದೆ. ಸುಮಾರು 1500 ವರ್ಷಗಳ ಇತಿಹಾಸದ ಸ್ಥಳ ಪುರಾಣವಿರುವ, ದೇಶ, ವಿದೇಶಗಳಿಂದ ಭಕ್ತರು ಆಗಮಿಸುವ ಸುಪ್ರಸಿದ್ಧ ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನ ಹಾಗೂ ಐತಿಹಾಸಿಕಕ್ಕೆ ಸಾಕ್ಷಿಯಾಗಿರುವ ಪ್ರಸಿದ್ಧ ಜೈನಬಸದಿ ಮತ್ತು ಕಿರು ಬಂದರುಗಳಿಂದ ಮಂಜೇಶ್ವರವು ಹೆಸರುವಾಸಿಯಾಗಿದೆ. ಸರ್ವ ಧರ್ಮ ಸಮನ್ವಯಿ ಪ್ರದೇಶವಾದ ಮಂಜೇಶ್ವರದಲ್ಲಿ ಸುಮಾರು ಇಪ್ಪತ್ತೈದು ಲಕ್ಷ ಜನರು ವಾಸಿಸುತ್ತಿದ್ದಾರೆ. ಮಂಜೇಶ್ವರಕ್ಕೂ ಬೆಂಗಳೂರಿಗೂ ಅಪಾರವಾದ ನಂಟು ಇದೆ. ಸಾವಿರ ಸಂಖ್ಯೆಗಳಲ್ಲಿ ಉದ್ಯೋಗಕ್ಕೆ ಮಂಜೇಶ್ವರದ ಜನರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸಕ್ರೀಯರಾಗಿ ITC, OTC ತರಬೇತಿ ಮುಗಿಸಿದ ಸ್ವಯಂ ಸೇವಕರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆದುದರಿಂದ ಜನರಿಗೆ ಮಂಗಳೂರಿನಿಂದ ಮಂಜೇಶ್ವರಕ್ಕೆ ಬರಲು ಈ ಎರಡು ರೈಲುಗಳನ್ನು ನಿಲುಗಡೆ ಮಾಡಿದಲ್ಲಿ ತುಂಬಾ ಪ್ರಯೋಜನಕರ"ವೆಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ. ಸಚಿವರನ್ನ ಭೇಟಿ ನೀಡಿ ಮನವಿಯಿತ್ತ ನಿಯೋಗದಲ್ಲಿ ಮಂಜೇಶ್ವರ ಗೌಡ ಸಾರಸ್ವತ ಬ್ರಾಹ್ಮಣ ಸಂಘದ ಅಧ್ಯಕ್ಷ ಎಂ. ಶ್ಯಾಮ ಪ್ರಸಾದ್ ಪ್ರಭು, ಪದಾಧಿಕಾರಿಗಳಾದ: ಗಜಾನನ ಕಿಣಿ, ನಿತಿನ್ ಚಂದ್ರ ಪೈ, ಸಂದೇಶ್ ಶೆಣೈ, ಪ್ರಸಾದ್ ಪ್ರಭು ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದರು.




