ಮಂಜೇಶ್ವರದಲ್ಲಿ ಯಶಸ್ವಿಗೊಂಡ ಪ್ರಪ್ರಥಮ ಅಂತರ್ ರಾಷ್ಟ್ರೀಯ ಉಚಿತ ಶೈಕ್ಷಣಿಕ ಕಾರ್ಯಾಗಾರ: "ವಿಶ್ವ ಆರೋಹ 2024."
ಏಪ್ರಿಲ್ 09, 2024
0
ಮಂಜೇಶ್ವರದಲ್ಲಿ ಯಶಸ್ವಿಗೊಂಡ ಪ್ರಪ್ರಥಮ ಅಂತರ್ ರಾಷ್ಟ್ರೀಯ ಉಚಿತ ಶೈಕ್ಷಣಿಕ ಕಾರ್ಯಾಗಾರ: "ವಿಶ್ವ ಆರೋಹ 2024."
ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ವಿಶ್ವಕರ್ಮ ಸಮಾಜ ಸಭಾದ ಮಂಗಳೂರು ಪ್ರಾಂತ್ಯದ ವತಿಯಿಂದ ಶ್ರೀ ಕ್ಷೇತ್ರದ ಸಭಾ ಭವನದಲ್ಲಿ, ಎಂಟನೇ ತರಗತಿಯಿಂದ ಸ್ನಾತಕೋತ್ತರ ಪದವಿ ವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ನಡೆಸಿದ "ಉಚಿತ ಶೈಕ್ಷಣಿಕ ಕಾರ್ಯಾಗಾರ" ಮತ್ತು ಆಧುನಿಕ ಶಿಕ್ಷಣ - ಉದ್ಯೋಗ ಅವಕಾಶಗಳ ಕುರಿತಾಗಿ "ಅಂತರ್ಜಾಲ ಸಹಿತ ಪ್ರಪ್ರಥಮ ಅಂತರ್ ರಾಷ್ಟ್ರೀಯ ಶೈಕ್ಷಣಿಕ ಕಾರ್ಯಾಗಾರ" ವು ನಡೆಯಿತು. ಕಾರ್ಯಾಗಾರದಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ವಿನಿಮಯ ನಡೆಯಿತು. ಅಲ್ಲದೇ ಯೋಗ, ವಿಶ್ವಕರ್ಮ ಪಂಚ ಕುಲ ಕಸುಬು, ವೇದಾಧ್ಯಯನ, ಸಂಗೀತ, ಭರತನಾಟ್ಯ, ಎನಿಮೇಷನ್ ವಿಷಯಗಳಿಗೆ ಸಂಬಂದಿಸಿದ ಸಂಪನ್ಮೂಲ ವ್ಯಕ್ತಿಗಳು ಮಾಹಿತಿಯನ್ನು ನೀಡಿದರು. ಕಾರ್ಯಾಗಾರದಲ್ಲಿ 200 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪತ್ರಕರ್ತ ದಿ. ಶ್ರೀಧರ ಆಚಾರ್ಯ ಬೆಂಗಳೂರುರವರ ನೆನಪಿಗಾಗಿ ಐ.ಐ.ಟಿ ಮದ್ರಾಸ್, ವಿನಿತ್ ಕುಮಾರ್ ಕೆ.ಎನ್ ಜಂಟಿಯಾಗಿ ಪ್ರತಿಭಾನ್ವಿತ ಎಂಟು ವಿದ್ಯಾರ್ಥಿಗಳಿಗೆ 'ಎಂಪವರಿಂಗ್ ಇಂಡಿಯಾ' ಕೃತಿ ಹಾಗೂ ಯಸ್. ವಾಸುದೇವ್ ಆಚಾರ್ ಪೂನಾ, ಅನಿಲ್ ಆಚಾರ್ಯ ಇವರಿಂದ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರತಿಭಾನ್ವಿತ ಮೂವರು ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಿದರು. ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಾಡೂರು ಎನ್. ಸುಬ್ರಹ್ಮಣ್ಯ ಹಾಗೂ ಮೊದಲ ಬಾರಿಗೆ ಕನ್ನಡದ ಕೃತಿಯೊಂದು ಮುಖಪುಟ ವಿನ್ಯಾಸಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿಗಳಿಸಿದ ವಿನ್ಯಾಸಗಾರ ಸುಧಾಕರ ದರ್ಬೆಯವರನ್ನು ಸಮಾಜದ ಗೌರವಾರ್ಥವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ವಿಶ್ವಕರ್ಮ ಸಮಾಜ ಸಭಾದ ಮಂಗಳೂರು ಪ್ರಾಂತ್ಯ ಅಧ್ಯಕ್ಷ ಐಲ ಚಂದ್ರಶೇಖರ ಆಚಾರ್ಯ ಕೋಟೆಕಾರ್, ಮೊಕ್ತೇಸರ ಯಸ್. ಕೆ. ವಿ ಮೋಹನದಾಸ್ ಆಚಾರ್ಯ ಮಂಗಳೂರು, ಎಂ. ಮೋಹನ ಆಚಾರ್ಯ ಕೋಟೆಕಾರ್, ಐಲ ಯೋಗೇಂದ್ರ ಆಚಾರ್ಯ ಸುರತ್ಕಲ್, ಜಯಕೇಶ್ ಆಚಾರ್ಯ ಮಂಗಳೂರು, ವಿನಯ್ ಆಚಾರ್ಯ ಕೋಟೆಕಾರ್, ಮಂಗಳೂರು ಪ್ರಾಂತ್ಯದ ಸರ್ವ ಸದಸ್ಯರು, ಶ್ರೀ ಶಂಕರಾಚಾರ್ಯ ಕಡ್ಲಾಸ್ಕರ್ ಆಸ್ಥಾನದ ವಿದ್ವಾಂಸರರಾದ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಡಾ.ಶ್ರೀಕಂಠಾಚಾರ್, ಸಿ.ಎ ನಾಗರಾಜ್ ಆಚಾರ್, ಡಾ. ಬಾಲಕೃಷ್ಣ ಬಿ.ಎಂ ಹೊಸಂಗಡಿ, ಡಾ. ರವೀಂದ್ರ ವೈ ಹುಬ್ಬಳ್ಳಿ, ಡಾ. ಪ್ರಜ್ವಲ್ ಚಂದ್ರಶೇಖರ್ ಉಪಸ್ಥಿತರಿದ್ದರು.



