ಜಾಲತಾಣ ಸಮಾಜದ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡಬೇಕು: ಒಡಿಯೂರು ಶ್ರೀ.
ಮಂಗಳೂರು: ಜಾಲತಾಣದಲ್ಲಿ ಎರಡು ವಿಭಾಗಗಳಿವೆ. ಒಂದು ಅಂತರ ಜಾಲ. ಇನ್ನೊಂದು ಅಂತರ್ ಜಾಲ ಎರಡನ್ನೂ ಅರ್ಥ ಮಾಡಿಕೊಂಡರೆ ಬದುಕು ಚೆನ್ನಾಗಿರುತ್ತದೆ, ಸುಂದರವಾಗಿರುತ್ತದೆ. ಅಂತರ ಜಾಲದಲ್ಲಿ ನಾವು ವಿಶ್ವವನ್ನೇ ನೋಡ ಬಹುದು. ಸಮಾಜದಲ್ಲಿ ಮಾಧ್ಯಮ ಹೆಚ್ಚಿನ ಕೆಲಸ ಮಾಡುತ್ತಿದೆ. ಕರ್ತವ್ಯ ಮಾಡುತ್ತಿದೆ. ವೆಬ್ ಸೈಟ್ ಜಾಲತಾಣ ಸಮಾಜದ ಆರೋಗ್ಯವನ್ನು ಕಾಪಾಡುವ ದೃಷ್ಟಿಯಲ್ಲಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿ ಮಾಧ್ಯಮದ ಮೇಲಿದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಲೋಕಾರ್ಪಗೊಂಡ ಅಭಿಮತ ಟಿವಿ ವೆಬ್ ಸೈಟ್ ಒಳ್ಳೆಯ ಕೆಲಸ ಮಾಡುವಂತಾಗಲಿ ಎಂದು ಶ್ರೀ ಕ್ಷೇತ್ರ ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದರು.
ಮಂಗಳೂರಿನ ಓಷಿಯನ್ ಪಲ್೯ ಹೋಟೇಲ್ ನ ಸಭಾಂಗಣದಲ್ಲಿ ಅಭಿಮತ ಟಿವಿ ವೆಬ್ ಸೈಟ್ ಲೋಕಾರ್ಪಣೆ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಭಿಮತ ಟಿವಿ ವೆಬ್ ಸೈಟ್ ಒಳ್ಳೆಯ ಉದ್ದೇಶ ಇಟ್ಟುಕೊಂಡು ಬಂದಿದೆ. ವಾಹಿನಿಗಳು ಮನುಷ್ಯನ ಬದುಕಿಗೆ ಹತ್ತಿರವಾಗುವಂತದ್ದು ಎಂದು ಸ್ವಾಮೀಜಿ ತಿಳಿಸಿದರು.
ಮೂಡಬಿದ್ರೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಅಭಿಮತ ಟಿವಿ ವೆಬ್ ಸೈಟ್ ನ್ನು ಉದ್ಘಾಟಿಸಿದರು.
ಅಭಿಮತ ಟಿವಿ ಮೂಡಬಿದ್ರೆಯಲ್ಲಿ ಯಶಸ್ವಿಯಾಗಿತ್ತು. ಪೈಪೋಟಿ ಇರುವ ಸಂದರ್ಭದಲ್ಲಿ ಮೌಲ್ಯವನ್ನು ಉಳಿಸಿಕೊಳ್ಳ ಬೇಕು. ಬಹಳಷ್ಟು ಒಳ್ಳೆಯ ಕಾರ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸ ನಡೆಯಬೇಕು. ಸಮಾಜದ ಪರಿಕಲ್ಪನೆಯಲ್ಲಿ ಇರುವವರು ನಾವು. ಸಮಾಜವನ್ನು ಕಟ್ಟುವ ಕೆಲಸ ಮಾಡವೇಕು. ಸಮಾಜವನ್ನು ದ್ವಂಸ ಮಾಡುವ ಕೆಲಸ ಮಾಡಬಾರದು. ಸಮಾಜವನ್ನು ಕೆಡಿಸುವವರೂ ಇದ್ದಾರೆ. ಹೀಗಾಗಿ ಜವಾಬ್ದಾರಿಯುತವಾಗಿ ಮಾಧ್ಯಮ ಹೆಜ್ಜೆ ಇಡ ಬೇಕಾಗಿದೆ. ಅಭಿಮತ ಟಿವಿ ಸಮಾಜವನ್ನು ಕಟ್ಟುವ ಕೆಲಸ ಮಾಡುವಂತಾಗಲಿ ಎಂದು ಡಾ ಮೋಹನ್ ಆಳ್ವ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮುಂಬೈ ಹೇರಂಭ ಗ್ರೂಫ್ ಆಫ್ ಇಂಡಸ್ಟ್ರೀಸ್ ನ ಚೆಯರ್ ಮೆನ್ ಕನ್ಯಾನ ಸದಾಶಿವ ಶೆಟ್ಟಿ ವಹಿಸಿದ್ದರು.
ಜೀವನದಲ್ಲಿ ಪ್ರತೀ ಶಬ್ದಕ್ಕೂ ಅರ್ಥ ಇದೆ. ಅದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಜೀವನದಲ್ಲಿ ಆ ಪಾಠವನ್ನು ನಾನು ಕಲಿತು ಕೊಂಡಿದ್ದೇನೆ. ಮಾಧ್ಯಮ ನನ್ನ ಆಸಕ್ತಿ. ಅಭಿಮತ ಟಿವಿ ವೆಬ್ ಸೈಟ್ ನ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಈ ಚಾನೆಲ್ ನ ಭಾಗವಾಗಿ ನಾನಿರುತ್ತೇನೆ. ಇದಕ್ಕೆ ಎಲ್ಲರ ಸಹಕಾರ ಇರಲಿ. ಸಮಾಜಕ್ಕೆ ಒಳ್ಳೆಯದನ್ನು ಬಯಸೋಣ. ಈ ನಿಟ್ಟಿನಲ್ಲಿ ಅಭಿಮತ ಟಿವಿ ವೆಬ್ ಸೈಟ್ ಮುಂದಿನ ದಿನಗಳಲ್ಲಿ ಬೇರೆ ಬೇರೆ ಕೇಬಲ್ ಗಳ ಮೂಲಕ ಕರಾವಳಿ ಭಾಗದ ಮೂಲೆ ಮೂಲೆಯ ಜನರನ್ನು ತಲುಪಲಿದೆ. ಅಲ್ಲದೆ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶಿಕ್ಷಣ, ಜಾನಪದ ವಿಚಾರಗಳಿಗೆ ಹೆಚ್ಚಿನ ಒತ್ತು ಕೊಟ್ಟು ಕೆಲಸ ಮಾಡಲು ಅಭಿಮತ ಶ್ರಮಿಸಲಿದೆ ಎಂದು ಕನ್ಯಾನ ಸದಾಶಿವ ಶೆಟ್ಟಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಅನಘ ರಿಫೈನರೀಸ್ ಪ್ರೈ ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ ಎನ್ ವಿ ಸಾಂಭಶಿವ ರಾವ್, ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ ಸುಬ್ಬಯ್ಯ ರೈ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ದಿ ಓಷಿಯನ್ ಪಲ್೯ನ ಉಪಾಧ್ಯಕ್ಷ ಗಿರೀಶ್ ಬಿ ಎನ್ ಭಾಗವಹಿಸಿದ್ದರು.
ಅಭಿಮತ ಟಿವಿ ವೆಬ್ ಸೈಟ್ ನ ಮಾಲಕಿ ಮಮತಾ ಪಿ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರ್ವಹಿಸಿದರು.



