ಕಾಸರಗೋಡು: ದೇಶಮಂಗಲದ ಪವಿತ್ರ ಶ್ರೀ ಶಂಕರನಾರಾಯಣ – ಶ್ರೀ ಕುಟ್ಟಿಚಾತ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಗಳ ಅಂಗವಾಗಿ ಸಿದ್ಧಪಡಿಸಲಾದ ವಿಜ್ಞಾಪನಾ ಪತ್ರವನ್ನು ಜಗದ್ಗುರು ಶಂಕರಾಚಾರ್ಯರು, ಶ್ರೀಮದ್ ಎಡನೀರು ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ನಿನ್ನೆ ಶ್ರೀ ಕ್ಷೇತ್ರದಲ್ಲಿ ನಡೆದ ಭಕ್ತಿಭರಿತ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು. ಶ್ರೀ ಕ್ಷೇತ್ರಕ್ಕೆ ಪ್ರಪ್ರಥಮ ಬಾರಿಗೆ ಆಗಮಿಸಿದ ಪರಮಪೂಜ್ಯ ಎಡನೀರು ಶ್ರೀಗಳನ್ನು ಪೂರ್ಣಕುಂಭ, ಮಂಗಳ ವಾದ್ಯಘೋಷ ಹಾಗೂ ಭಕ್ತರ ಜಯಘೋಷಗಳೊಂದಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ನಡೆದ ಸಮಾರಂಭದಲ್ಲಿ ಶ್ರೀಗಳು ಜೀರ್ಣೋದ್ಧಾರ ಕಾರ್ಯಗಳ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿ ತಮ್ಮ ಅನುಗ್ರಹ ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, “ಈ ವಿಜ್ಞಾಪನಾ ಪತ್ರವು ಕೇವಲ ಭಕ್ತಬಾಂಧವರಲ್ಲಿ ನೆರವು ಕೋರುವ ಪತ್ರವಲ್ಲ. ಜೀರ್ಣೋದ್ಧಾರ ಕಾರ್ಯಗಳು ಯಾವುದೇ ಅಡಚಣೆಯಿಲ್ಲದೆ ಅತ್ಯಂತ ಸುಗಮವಾಗಿ ಮತ್ತು ಶೀಘ್ರವಾಗಿ ನೆರವೇರಲೆಂದು ಶ್ರೀ ಶಂಕರನಾರಾಯಣ–ಶ್ರೀ ಕುಟ್ಟಿಚಾತ ದೇವರಲ್ಲಿ ಸಲ್ಲಿಸುವ ಭಕ್ತಿಪೂರ್ವಕ ವಿಜ್ಞಾಪನೆಯಾಗಿದೆ” ಎಂದು ನುಡಿದರು. ಭಕ್ತರ ಪ್ರಾರ್ಥನೆ ಮತ್ತು ಸಂಕಲ್ಪವನ್ನು ಭಗವಂತನು ಮನ್ನಿಸಿ, ಎರಡು ವರ್ಷಗಳೊಳಗಾಗಿ ಜೀರ್ಣೋದ್ಧಾರ ಕಾರ್ಯಗಳು ಪೂರ್ಣಗೊಂಡು ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆಯುವಂತೆ ಅನುಗ್ರಹಿಸಲಿ ಎಂದು ಹಾರೈಸಿದರು. ಸನಾತನ ಧರ್ಮದ ಉಳಿವು, ಬೆಳವಣಿಗೆ ಹಾಗೂ ಧಾರ್ಮಿಕ ಮೌಲ್ಯಗಳ ಸಂರಕ್ಷಣೆಗೆ ದೇವಾಲಯಗಳ ಜೀರ್ಣೋದ್ಧಾರ, ನವೀಕರಣ ಮತ್ತು ಬ್ರಹ್ಮಕಲಶೋತ್ಸವದಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯವೆಂದು ಶ್ರೀಗಳು ಅಭಿಪ್ರಾಯಪಟ್ಟರು. ಇಂತಹ ಧಾರ್ಮಿಕ ಕಾರ್ಯಗಳ ಮೂಲಕ ಹಿಂದೂ ಸಮಾಜದಲ್ಲಿ ಐಕ್ಯತೆ, ಸಂಘಟನೆ ಹಾಗೂ ಧಾರ್ಮಿಕ ಜಾಗೃತಿ ವೃದ್ಧಿಯಾಗುತ್ತದೆ. ಆದ್ದರಿಂದ ಸಮಾಜದ ಎಲ್ಲ ವರ್ಗದ ಜನರು ಸಮರ್ಪಣಾ ಮನೋಭಾವದಿಂದ ಸಂಘಟಿತರಾಗಿ ಇಂತಹ ಪುಣ್ಯಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು. ಮುಂದುವರಿದು ಮಾತನಾಡಿದ ಶ್ರೀಗಳು, “ಸಂಪತ್ತನ್ನು ಕೇವಲ ಸಂಗ್ರಹಿಸಿಕೊಂಡು ಇಡುವುದರಿಂದ ಪ್ರಯೋಜನವಿಲ್ಲ. ಅದನ್ನು ಸತ್ಕಾರ್ಯಗಳಿಗೆ ವಿನಿಯೋಗಿಸಿ ಪುಣ್ಯ ಸಂಪಾದಿಸಬೇಕು. ದಾನವನ್ನು ಪ್ರಚಾರಕ್ಕಾಗಿ ಅಥವಾ ಪ್ರತಿಷ್ಠೆಗಾಗಿ ಮಾಡುವುದಕ್ಕಿಂತ, ಭಗವಂತನಿಗೂ ದಾನ ಮಾಡಿದ ವ್ಯಕ್ತಿಗೂ ಮಾತ್ರ ತಿಳಿದಿರುವ ದಾನವೇ ಅತ್ಯುನ್ನತ ಮತ್ತು ಶ್ರೇಷ್ಠ ದಾನವಾಗಿದೆ” ಎಂದು ತಿಳಿಸಿದರು. ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಕ್ಷೇತ್ರದ ತಂತ್ರಿವರ್ಯರು ಹಾಗೂ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ತ್ರ ಅವರು, ಶ್ರೀ ಕ್ಷೇತ್ರದ ಐತಿಹಾಸಿಕ ಹಿನ್ನೆಲೆ, ನಡೆದು ಬಂದ ದಾರಿ, ಕ್ಷೇತ್ರದ ಬೆಳವಣಿಗೆ, ಸೇವೆ ಸಲ್ಲಿಸಿದ ಮಹನೀಯರ ಕೊಡುಗೆ ಹಾಗೂ ಕ್ಷೇತ್ರದ ಮಹಿಮೆಯನ್ನು ವಿವರಿಸಿದರು. ಇಲ್ಲಿನ ಶ್ರೀ ಶಂಕರನಾರಾಯಣ–ಶ್ರೀ ಕುಟ್ಟಿಚಾತ ದೇವರ ಕಾರಣಿಕ ಶಕ್ತಿ ಹಾಗೂ ಅನೇಕ ಪವಾಡಗಳು ಭಕ್ತರನ್ನು ಅಪಾರ ಸಂಖ್ಯೆಯಲ್ಲಿ ಆಕರ್ಷಿಸುತ್ತಿದ್ದು, ಕ್ಷೇತ್ರವು ರಾಜ್ಯದ ಹೊರಗೂ ದೇಶವ್ಯಾಪಿ ಪ್ರಸಿದ್ಧಿಯನ್ನು ಗಳಿಸುತ್ತಿದೆ ಎಂದು ಹೇಳಿದರು. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜೀರ್ಣೋದ್ಧಾರ ಕಾರ್ಯಗಳು ಅತ್ಯಂತ ಯಶಸ್ವಿಯಾಗಿ ಹಾಗೂ ಸುಗಮವಾಗಿ ನಡೆಯಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹಾಗೂ ಹಡ್ಕೋಮಾಜಿ ಕಾರ್ಯನಿರ್ವಾಹಕ ನಿರ್ದೇಶಕರಾದ ಕೋಟೆಕುಂಜ ರವೀಂದ್ರ ಆಳ್ವ ಕಂಬಾರು ಅವರು ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಸಮಸ್ತ ಭಕ್ತರ ಸಂಕಲ್ಪದ ಯೋಜನೆಯಾಗಿದ್ದು, ಪ್ರತಿಯೊಬ್ಬರೂ ಇದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. “ಪ್ರತಿ ಮನೆಯಿಂದಲೂ ಕನಿಷ್ಠ ಮಟ್ಟದ ದೇಣಿಗೆಯಾದರೂ ಬಂದಲ್ಲಿ ಜೀರ್ಣೋದ್ಧಾರ ಕಾರ್ಯವು ಅತಿ ಶೀಘ್ರದಲ್ಲಿ ಪೂರ್ಣಗೊಳ್ಳಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು. ದೇಣಿಗೆ ನೀಡುವ ಎಲ್ಲ ಭಕ್ತರನ್ನೂ ಸಮಾನ ದೃಷ್ಟಿಯಿಂದ ಕಾಣುವುದು ಸಮಿತಿಯ ಉದ್ದೇಶವಾಗಿದೆ. ಯಾರಿಗೂ ವಿಶೇಷ ಸ್ಥಾನಮಾನ ಅಥವಾ ಪ್ರತ್ಯೇಕ ಮನ್ನಣೆ ನೀಡುವ ಉದ್ದೇಶವಿಲ್ಲ. ಅಧ್ಯಕ್ಷರು, ಕಾರ್ಯದರ್ಶಿಗಳು ಅಥವಾ ಪದಾಧಿಕಾರಿಗಳು ಎಂಬ ಭೇದವಿಲ್ಲದೆ ಎಲ್ಲರೂ ದೇವರ ಸೇವಕರೇ ಆಗಿದ್ದು, ಈ ಪುಣ್ಯಕಾರ್ಯದಲ್ಲಿ ಎಲ್ಲರೂ ಸಮಾನವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು. ಸಮಾರಂಭದಲ್ಲಿ ಕಳೆದ ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿಯಾಗಿದ್ದ ಎಲ್ಲಂಗಳ ವಾಸುದೇವ ಹೊಳ್ಳ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಜಯರಾಮ ರೈ ಹಾಗೂ ಗಣೇಶ್ ಭಂಡಾರಿ ಮಾಯಿಪ್ಪಾಡಿ, ಬೆದ್ರಡ್ಕ ಪೂಮಾಣಿ–ಕಿನ್ನಿಮಾಣಿ ದೇವಸ್ಥಾನದ ಪ್ರತಿನಿಧಿ ಲಕ್ಷ್ಮಣ ನೊಂಡ ಕೋಟೆಕುಂಜ, ಪುತ್ತೂರು ಕೊಟ್ಯ ಶ್ರೀ ಧೂಮಾವತಿ ದೇವಸ್ಥಾನದ ಧರ್ಮದರ್ಶಿ ನಾರಾಯಣ ಪೂಜಾರಿ ಹಾಗೂ ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದ ಅಧ್ಯಕ್ಷ ಶೀನ ಶೆಟ್ಟಿ ಕಜೆ ಅವರು ಶುಭ ಹಾರೈಕೆಗಳನ್ನು ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪರಮಪೂಜ್ಯ ಎಡನೀರು ಶ್ರೀಗಳು ಜೀರ್ಣೋದ್ಧಾರ ನಿಧಿ ಸಂಗ್ರಹ ಅಭಿಯಾನದ ಅಂಗವಾಗಿ ಮುದ್ರಿಸಲಾದ ವಿಜ್ಞಾಪನಾ ಪತ್ರಗಳು ಹಾಗೂ ರಸೀದಿ ಪುಸ್ತಕಗಳನ್ನು ಸೂರ್ಯನಾರಾಯಣ ಕಾರಂತ, ಪ್ರಭಾಕರ ಕಾರಂತ, ಹರೀಶ್ ದೇಶಮಂಗಲ, ರಾಜೇಶ್ ಶೆಟ್ಟಿ ಬಳ್ಳೂರು, ಶ್ರೀಮತಿ ಸುಮನಾ ಕಾರಂತ ,ಶ್ಯಾಮಲ ಹಾಗೂ ಪುಷ್ಪಲತಾ ಇವರಿಗೆ ಸಾಂಕೇತಿಕವಾಗಿ ವಿತರಿಸುವ ಮೂಲಕ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು.
ಅಲ್ಲದೆ ಶ್ರೀಗಳವರ ಸಮ್ಮುಖದಲ್ಲಿ ಭಕ್ತರಿಂದ ಮುಷ್ಟಿಕಾಣಿಕೆ ಸಮರ್ಪಣೆ ನಡೆಯಿತು. ಅನೇಕ ಭಕ್ತಾದಿಗಳು ತಮ್ಮ ವೈಯಕ್ತಿಕ ಹೆಸರಿನಲ್ಲಿ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ಜೀರ್ಣೋದ್ಧಾರ ನಿಧಿಗೆ ಉದಾರ ದೇಣಿಗೆಗಳ ವಾಗ್ದಾನ ಮಾಡಿ ಕ್ಷೇತ್ರಾಭಿವೃದ್ಧಿಗೆ ಬೆಂಬಲ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಸುಬ್ರಹ್ಮಣ್ಯ ಕಾರಂತ, ಲೆಕ್ಕಪರಿಶೋಧಕ ವಾಸುದೇವ ಕಾರಂತ, ಸತೀಶ್ ಕಾರಂತ, ಅರುಣೇಶ್ ಕಾರಂತ, ಅಖಿಲೇಶ್ ಕಾರಂತ, ರವಿ ಬೆದ್ರಡ್ಕ, ಉಮೇಶ್ ಪೂಜಾರಿ, ರಾಧಾಕೃಷ್ಣ ಬೆದ್ರಡ್ಕ, ದೇವದಾಸ ಆಚಾರ್ಯ ದೇಶಮಂಗಲ, ನಾರಾಯಣ ಶೆಟ್ಟಿ ಕೋಟೆಕುಂಜ, ಸುಂದರ ಸೇರಿಗಾರ ಬೆದ್ರಡ್ಕ, ರಾಘು ಮಾಯಿಪ್ಪಾಡಿ, ಇಂಜಿನಿಯರ್ ಶಿವಶಂಕರ ಭಟ್ ಕಿದೂರು ಸೇರಿದಂತೆ ಅನೇಕ ಗಣ್ಯರು, ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಶರಣ್ಯ, ಕುಮಾರಿ ಸಾವಿತ್ರಿ ಹಾಗೂ ಕುಮಾರಿ ಧನಲಕ್ಷ್ಮಿ ಅವರು ಪ್ರಾರ್ಥನೆ ಹಾಡಿದರು.
ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು ಅವರು ಸ್ವಾಗತಿಸಿದರು. ಕಾರ್ಯದರ್ಶಿ ಪ್ರಸನ್ನ ಕಾರಂತ ಅವರು ವಂದಿಸಿದರು ಕಾರ್ಯದರ್ಶಿ ಮೋಹನ್ ಕುಮಾರ್ ಶೆಟ್ಟಿ ಅಡ್ಕ ಹಾಗೂ ಉಪಾಧ್ಯಕ್ಷ ಜಗದೀಶ್ ಆಚಾರ್ಯ ಕಂಬಾರು ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಭಕ್ತಿ, ಶ್ರದ್ಧೆ, ಸಮರ್ಪಣೆ ಹಾಗೂ ಸಮಾಜದ ಸಂಘಟಿತ ಸಹಕಾರದ ಮಹತ್ವವನ್ನು ಸಾರಿದ ಈ ಸಮಾರಂಭವು ದೇಶಮಂಗಲ ಶ್ರೀ ಶಂಕರನಾರಾಯಣ–ಶ್ರೀ ಕುಟ್ಟಿಚಾತ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಹೊಸ ಚೈತನ್ಯ ತುಂಬಿದ್ದು, ಭಕ್ತರಲ್ಲಿ ಅಪಾರ ಉತ್ಸಾಹ, ವಿಶ್ವಾಸ ಮತ್ತು ಆಶಾಭಾವನೆಯನ್ನು ಮೂಡಿಸಿತು. ಶ್ರೀ ಶಂಕರನಾರಾಯಣ–ಶ್ರೀ ಕುಟ್ಟಿಚಾತ ದೇವರ ಅನುಗ್ರಹದಿಂದ ಜೀರ್ಣೋದ್ಧಾರ ಕಾರ್ಯಗಳು ಶೀಘ್ರ ಪೂರ್ಣಗೊಂಡು ಭವ್ಯ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನೆರವೇರಲೆಂಬ ಸಂಕಲ್ಪದೊಂದಿಗೆ ಸಮಾರಂಭ ಯಶಸ್ವಿಯಾಗಿ ಸಂಪನ್ನವಾಯಿತು.
