ಕಾಸರಗೋಡು: ಕೇರಳದಲ್ಲಿ ಚುನಾವಣಾ ಸಮಯ ಎಂದರೆ ಗೋಡೆ ಬರಹ ಒಂದು ವಿಶೇಷ ಸಂಪ್ರದಾಯ. ಡಿಜಿಟಲ್ ಯುಗದಲ್ಲಿದ್ದರೂ ಈ ಪರಂಪರೆ ಇಂದಿಗೂ ಜೀವಂತವಾಗಿಯೇ ಮುಂದುವರಿಯುತ್ತಿದೆ. ಆದರೆ ಈಗ ಈ ಸಂಪ್ರದಾಯಕ್ಕೂ ತಂತ್ರಜ್ಞಾನದ ಸ್ಪರ್ಶ ಲಭಿಸಿದೆ.
ಗೋಡೆ ಬರಹ ರಚನೆಗೆ ರೋಬೋಟ್ ಬಳಕೆಯ ಹೊಸ ಪ್ರಯೋಗ ಕೇರಳದಲ್ಲಿ ಗಮನ ಸೆಳೆಯುತ್ತಿದೆ. “ಚುವರ್ ಬೋಟ್” ಎಂಬ ರೋಬೋಟ್ ಆಧುನಿಕ ವಿನ್ಯಾಸದಲ್ಲಿ, ಸುಂದರವಾಗಿ ಮತ್ತು ವೇಗವಾಗಿ ಗೋಡೆ ಬರಹಗಳನ್ನು ಬರೆಯುವ ಸಾಮರ್ಥ್ಯ ಹೊಂದಿದೆ. ಈ ತಂತ್ರಜ್ಞಾನವನ್ನು ಮೊದಲ ಬಾರಿಗೆ ಪಾಲಕ್ಕಾಡ್ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಹಾಗೂ ನಟ ರಮೇಶ್ ಪಿಶಾರಡಿ ಪರವಾಗಿ ಪ್ರಾಯೋಗಿಕವಾಗಿ ಬಳಸಲಾಗಿದೆ.
ಈ ರೋಬೋಟ್ ಅನ್ನು ಕೇರಳ ಸ್ಟಾರ್ಟಪ್ ಮಿಷನ್‌ನ ಸಹಕಾರದಲ್ಲಿ ಪಾಲಕ್ಕಾಡ್ ಮೂಲದ ಟೊವೋನೋವಾ ಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಯಾವುದೇ ಭಾಷೆಯಲ್ಲಿ ಬರೆಯುವ ಸಾಮರ್ಥ್ಯ ಹೊಂದಿರುವ ಈ ಯಂತ್ರ, ಚಿತ್ರಗಳನ್ನು ಕೂಡ ಸುಲಭವಾಗಿ ಬಿಡಿಸಬಲ್ಲದು.
ಎರಡರಿಂದ ಮೂರು ಮೀಟರ್ ಉದ್ದದ ಗೋಡೆಯ ಮೇಲೆ ಕೇವಲ 15–20 ನಿಮಿಷಗಳಲ್ಲಿ ಆಕರ್ಷಕ ಭಿತ್ತಿ ಬರಹವನ್ನು ಸಿದ್ಧಪಡಿಸುವ ಈ ರೋಬೋಟ್ ಕಾರ್ಯಕ್ಕೆ ಒಬ್ಬ ಟೆಕ್ನೀಷಿಯನ್ ಹಾಗೂ ಇಬ್ಬರು ನೌಕರರು ಅಗತ್ಯವಿರುತ್ತಾರೆ.
