ಕುಂಬಳೆ: ಕುಂಬಳೆ ಪಂಚಾಯತ್ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿ ಭರ್ಜರಿ ರೋಡ್ ಶೋ ನಡೆಯಿತು. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಹಾಗೂ ತಿರುವನಂತಪುರ ಮೇಯರ್ ವಿವಿ ರಾಜೇಶ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಹಲವು ಕಾರ್ಯಕರ್ತರು ಭಾಗವಹಿಸಿದ ರೋಡ್ ಶೋ, ಕುಂಬಳೆ ಪೇಟೆಯಲ್ಲಿ ಎನ್‌ಡಿಎ ಶಕ್ತಿ ಪ್ರದರ್ಶನವಾಯಿತು. ಕುಂಬಳೆ ಗೋಪಾಲಕೃಷ್ಣ ದೇವಸ್ಥಾನದಿಂದ ಆರಂಭವಾದ ರೋಡ್ ಶೋ, ನಗರ ಸುತ್ತಿ ಆಟೋ ಸ್ಟ್ಯಾಂಡ್ ಸಮೀಪ ಸಮಾಪ್ತಿಯಾಯಿತು.
ವಿವಿ ರಾಜೇಶ್ ಮಾತನಾಡಿ, ಮಂಜೇಶ್ವರದಲ್ಲಿ ಕೆ. ಸುರೇಂದ್ರನ್ ಗೆಲುವು ಸಾಧಿಸಿದರೆ ಕೇಂದ್ರದ ಸಹಾಯದಿಂದ ಹಲವು ಯೋಜನೆಗಳನ್ನು ಕ್ಷೇತ್ರಕ್ಕೆ ತಲುಪಲಿದೆ ಎಂದು ಭರವಸೆ ನೀಡಿದರು. ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಈ ಬಾರಿ ಜನರು ಎನ್‌ಡಿಎಗೆ ಬೆಂಬಲ ನೀಡುವರೆಂದು ಕೆ. ಸುರೇಂದ್ರನ್ ಆಶಾ ಭಾವನೆ ಪ್ರಕಟಿಸಿದರು.
ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ವಿ. ರವೀಂದ್ರನ್, ಸತೀಶ್ ಕುಂಬಳೆ, ಪ್ರೇಮಲತಾ ಗಟ್ಟಿ, ಸುನಿಲ್ ಅನಂತಪುರ ಮೊದಲಾದವರು ರೋಡ್ ಶೋ ಗೆ ನೇತೃತ್ವ ನೀಡಿದರು.
