ಕಾಸರಗೋಡು: ಕಾಸರಗೋಡು ಸಮೀಪದ ಮೇಲ್ಪರಂಬ ನಿವಾಸಿ ಡಾ. ಚೇತನಾ ಸಿ.ಎಸ್. ಅವರು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿ ಜಾಗತಿಕ ಮಟ್ಟದಲ್ಲಿ ಕೀರ್ತಿ ಗಳಿಸಿದ್ದಾರೆ. ಎಂ.ಆರ್.ಸಿ.ಎಸ್. (ಇ.ಎನ್.ಟಿ) ಪರೀಕ್ಷೆಯಲ್ಲಿ ಶೇ. 92 ಅಂಕಗಳನ್ನು ಪಡೆದು ವಿಶ್ವ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಅವರು, ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಹ್ಯಾಲೆಟ್ ಪ್ರೈಜ್ ಮೆಡಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಾರ್ಚ್ 26ರಂದು ಲಂಡನ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪ್ರಶಶಸ್ತಿ ಪ್ರದಾನ ಮಾಡಲಾಯಿತು. ಸರ್ಜನ್‌ಗಳಿಗೆ ನೀಡಲಾಗುವ ಅತ್ಯುನ್ನತ ಜಾಗತಿಕ ಗೌರವಗಳಲ್ಲಿ ಒಂದಾದ ಈ ಪ್ರಶಸ್ತಿ, ಎಂ.ಆರ್.ಸಿ.ಎಸ್. ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಶೇ. 90 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಅಗ್ರ ಪ್ರತಿಭಾವಂತರಿಗೆ ಮಾತ್ರ ನೀಡಲಾಗುತ್ತದೆ. ಈ ಬಾರಿ ಡಾ. ಚೇತನಾ ಅವರು ಶೇ. 92 ಅಂಕಗಳನ್ನು ಗಳಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.
ಭಾರತದಲ್ಲಿ ಈ ಗೌರವವನ್ನು ಪಡೆದ ವೈದ್ಯರ ಸಂಖ್ಯೆ ಬಹಳ ಕಡಿಮೆ ಇರುವ ಹಿನ್ನೆಲೆಯಲ್ಲಿ, ಡಾ. ಚೇತನಾ ಅವರ ಸಾಧನೆ ಇನ್ನಷ್ಟು ವಿಶೇಷವಾಗಿದೆ.
ಪ್ರಸ್ತುತ ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನಲ್ಲಿ ಇ.ಎನ್.ಟಿ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿರುವ ಅವರು, ಯೆನೆಪೋಯ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಮನೋವೈದ್ಯರಾದ ಡಾ. ಶಾಶ್ವತ್ ಸತ್ಯನಾಥ್ ಅವರ ಪತ್ನಿಯಾಗಿದ್ದಾರೆ.
ಡಾ. ಚೇತನಾ ಅವರು ಕಾಸರಗೋಡಿನ ಕಳನಾಡು ನರ್ಸಿಂಗ್ ಹೋಂನ ಡಾ. ಎಂ. ಸತ್ಯನಾಥ್ ಮತ್ತು ಡಾ. ಗೀತಾ ಸತ್ಯನಾಥ್ ಅವರ ಸೊಸೆಯಾಗಿದ್ದು, ಉಜಿರೆಯ ಪ್ರೊ. ಶಿವರಾವ್ ಹಾಗೂ ಜಾಹ್ನವಿ ದಂಪತಿಯ ಪುತ್ರಿಯಾಗಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಅಪೂರ್ವ ಸಾಧನೆಯ ಮೂಲಕ ಡಾ. ಚೇತನಾ ಅವರು ಕಾಸರಗೋಡು ಹಾಗೂ ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಇವರ ಸಾಧನೆಗೆ ಕಾಸರಗೋಡು ಮತ್ತು ಮಂಗಳೂರಿನ ಐಎಂಎ ಸೇರಿದಂತೆ ಅನೇಕ ಸಂಘಟನೆಗಳು ಅಭಿನಂದನೆ ಸಲ್ಲಿಸಿವೆ.
