ಕಾಸರಗೋಡು ಜಿಲ್ಲೆಯಲ್ಲಿ ಕುಲಾಲ ಸಮುದಾಯದ ಮಕ್ಕಳಿಗೆ ಸಿಗುತ್ತಿದ್ದ ಸರ್ಕಾರಿ ಸವಲತ್ತುಗಳನ್ನು ಮರುಸ್ಥಾಪಿಸುವಂತೆ ಕೇರಳ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಕಳೆದ ವರ್ಷದಿಂದ ಕೇರಳ ಸರ್ಕಾರದ e-District OEC ಪೋರ್ಟಲ್‌ನಲ್ಲಿ “ಕುಲಾಲ” ಎಂಬ ಹೆಸರನ್ನು ಕೈಬಿಟ್ಟ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಜಾತಿ ಪ್ರಮಾಣಪತ್ರ ನೀಡಲು ನಿರಾಕರಿಸುತ್ತಿದ್ದರು. ಇದರಿಂದ ಕುಲಾಲ ಸಮುದಾಯದ ಮಕ್ಕಳಿಗೆ ಸರ್ಕಾರದಿಂದ ಲಭ್ಯವಾಗುವ ಶೈಕ್ಷಣಿಕ ಸವಲತ್ತುಗಳು ಮತ್ತು ವಿದ್ಯಾರ್ಥಿ ವೇತನಗಳು ಸ್ಥಗಿತಗೊಂಡಿದ್ದವು.
ಈ ಸಮಸ್ಯೆಯನ್ನು ಮನಗಂಡು ಕುಲಾಲ ವೇದಿಕೆ ಮಂಜೇಶ್ವರದ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಮನವಿಯ ಪ್ರತಿಯನ್ನು ಸಿಪಿಐಎಂ ನೇತಾರ ಕೆ.ಆರ್. ಜಯಾನಂದರವರಿಗೂ ನೀಡಲಾಗಿತ್ತು. ನಂತರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಜಯಾನಂದರವರು ಸರ್ಕಾರದ ಮೇಲೆ ಒತ್ತಡ ಹೇರಿ ಮರುಸ್ಥಾಪನೆಗೆ ಮುಂದಾದರು.
ಅದರ ಫಲವಾಗಿ ಕೇರಳ ಸರ್ಕಾರ ತುಳು ಮಾತೃಭಾಷೆಯ ಕುಲಾಲ ಸಮುದಾಯವನ್ನು ಮತ್ತೆ OEC ಪಟ್ಟಿಯಲ್ಲಿ ಸೇರಿಸಿ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದ ಕೇರಳದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಕುಲಾಲ ಸಮುದಾಯದ ಮಕ್ಕಳಿಗೆ ಶೈಕ್ಷಣಿಕ ಮೀಸಲಾತಿ ಹಾಗೂ ವಿದ್ಯಾರ್ಥಿ ವೇತನಗಳ ಸೌಲಭ್ಯ ಮತ್ತೆ ಲಭ್ಯವಾಗಲಿದೆ.
ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರದ ಕ್ರಮವನ್ನು ಹಾಗೂ ಇದಕ್ಕಾಗಿ ಶ್ರಮಿಸಿದ ಕೆ.ಆರ್. ಜಯಾನಂದರವರನ್ನು ಸಿಪಿಐಎಂ ವತಿಯಿಂದ ಅಭಿನಂದಿಸಲಾಗಿದೆ.
