ಬೀಡಿ ಉದ್ಯಮಕ್ಕೆ ವಿಧಿಸಿರುವ ಸರಕು ಮತ್ತು ಸೇವಾ ತೆರಿಗೆಯನ್ನು ಶೇ.28 ರಿಂದ ಶೇ.5 ಕ್ಕೆ ಇಳಿಸಲು ಶಿಫಾರಸು ಮಾಡಬೇಕು. - ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್ (ಎಚ್.ಎಂ.ಎಸ್) ಮತ್ತು ಬೀಡಿ ಮಜ್ದೂರ್ ಸಂಘ (ಬಿ.ಎಂ.ಎಸ್) ಆಗ್ರಹ.
ಡಿಸೆಂಬರ್ 25, 2024
0
ಬೀಡಿ ಉದ್ಯಮಕ್ಕೆ ವಿಧಿಸಿರುವ ಸರಕು ಮತ್ತು ಸೇವಾ ತೆರಿಗೆಯನ್ನು ಶೇ.28 ರಿಂದ ಶೇ.5 ಕ್ಕೆ ಇಳಿಸಲು ಶಿಫಾರಸು ಮಾಡಬೇಕು. - ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್ (ಎಚ್.ಎಂ.ಎಸ್) ಮತ್ತು ಬೀಡಿ ಮಜ್ದೂರ್ ಸಂಘ (ಬಿ.ಎಂ.ಎಸ್) ಆಗ್ರಹ.
ಮಂಗಳೂರು: ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಬದುಕು ರೂಪಿಸಿಕೊಟ್ಟ ಬೀಡಿಗೆ ಈಗಾಗಲೇ ವಿಧಿಸಿರುವ ಜಿ.ಎಸ್.ಟಿ ಹೊರೆಯಿಂದ ಬೀಡಿ ನಂಬಿದವರಿಗೆ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಹೀಗಾಗಿ ಬೀಡಿ ಉದ್ಯಮಕ್ಕೆ ವಿಧಿಸಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯನ್ನು ಶೇ.28 ರಿಂದ ಶೇ.5 ಕ್ಕೆ ಇಳಿಸಲು ಶಿಫಾರಸು ಮಾಡಬೇಕು ಎಂದು ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್ (ಎಚ್.ಎಂ.ಎಸ್) ಮತ್ತು ಬೀಡಿ ಮಜ್ದೂರ್ ಸಂಘ (ಬಿ.ಎಂ.ಎಸ್) ಆಗ್ರಹಿಸಿದೆ. ನಿನ್ನೆ ಮಂಗಳೂರಿನಲ್ಲಿ ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಮಹಮ್ಮದ್ ರಫಿ ಮತ್ತು ಬೀಡಿ ಮಜ್ದೂರ್ ಸಂಘದ ಅಧ್ಯಕ್ಷ ಕೆ. ವಿಶ್ವನಾಥ ಶೆಟ್ಟಿ ಅವರು, ಬೀಡಿಯು ಸುಮಾರು 120 ವರ್ಷಗಳ ಇತಿಹಾಸ ಹೊಂದಿರುವ ಗುಡಿ ಕೈಗಾರಿಕೆ. ದೇಶಾದ್ಯಂತ ಇಂದು ಸುಮಾರು 3 ಕೋಟಿಗಿಂತಲೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದು, ಬಡಕುಟುಂಬಕ್ಕೆ ಅನ್ನ ನೀಡುತ್ತಿದೆ. ಇತ್ತೀಚೆಗೆ ಬಂದ ಮಾಧ್ಯಮ ವರದಿಗಳ ಪ್ರಕಾರ, ಜಿ.ಎಸ್.ಟಿ ಕೌನ್ಸಿಲ್ ನ ಉಪಸಮಿತಿಯು (ಜಿ.ಒ.ಎಂ) ತಂಬಾಕು ಉತ್ಪನ್ನಗಳ ಜಿ.ಎಸ್.ಟಿ ದರವನ್ನು ಶೇ.28 ರಿಂದ ಶೇ.35 ಹೆಚ್ಚಿಸಲು ಶಿಫಾರಸು ಮಾಡಿದೆ. ಇದು ಬೀಡಿಯನ್ನು ನಂಬಿದವರಿಗೆ ದೊಡ್ಡ ಹೊಡೆತ ನೀಡಲಿದೆ ಎಂದರು. ಬೀಡಿಗೆ ಇದೇ ರೀತಿ ತೆರಿಗೆ ಹೊರೆ ನೀಡಿದರೆ ಬೀಡಿ ಮಾಲಕರು ಕಡಿಮೆ ದರಕ್ಕೆ ಕಾರ್ಮಿಕರಿಂದ ಪಶ್ಚಿಮ ಬಂಗಾಲದಿಂದಲೇ ಬೀಡಿ ತಯಾರಿಸುವ ಆಲೋಚನೆ ನಡೆಸುತ್ತಿದ್ದಾರೆ. ಹೀಗಾದರೆ ಬೀಡಿಯನ್ನೇ ನಂಬಿದವರಿಗೆ ಉದ್ಯೋಗ ನಷ್ಟ ಆಗುವ ಭೀತಿ ಇದೆ ಎಂದರು. ಶೇ. 28 ಜಿ.ಎಸ್.ಟಿ ವಿಧಿಸಿರುವುದು ಕೆಲವು ಬೀಡಿ ಮಾಲಕರಿಗೆ ತೆರಿಗೆ ವಂಚಿಸಲು ಪ್ರೇರಣೆ ನೀಡಿದಂತೆ ಆಗಿದೆ. ದೊಡ್ಡ ಸಂಖ್ಯೆಯ ಬೀಡಿ ಕಾರ್ಮಿಕರಿಗೆ ನೋಂದಾಯಿತರಲ್ಲದ ತಯಾರಕರು ಕೆಲಸ ನೀಡುತ್ತಿದ್ದಾರೆ. ನೋಂದಣಿಗೊಳ್ಳದ ಮಾಲಕರು ತಮ್ಮ ಆಧೀನದಲ್ಲಿ ದುಡಿಯುವ ಕಾರ್ಮಿಕರಿಗೆ ಅತಿ ಕಡಿಮೆ ವೇತನ ನೀಡುತ್ತಾರೆ. ಅಲ್ಲದೆ ಭವಿಷ್ಯನಿಧಿ ಸಹಿತ ವಿವಿಧ ಸರಕಾರಿ ಸೌಲಭ್ಯಗಳಿಂದ ಇಂತಹ ಕಾರ್ಮಿಕರು ವಂಚಿತರಾಗುತ್ತಿದ್ದಾರೆ ಎಂದು ಅವರು ಹೇಳಿದರು. ಸಂಘಟನೆ ಮುಖಂಡರಾದ ಹರೀಶ್ ಕೆ.ಎಸ್., ಪಿ.ಎಚ್.ಮೊಹಮ್ಮದ್, ಗೋಪಾಲಕೃಷ್ಣ, ನಳಿನಿ ಅಡ್ಯಾರ್, ಪದ್ಮಾವತಿ ಮೊದಲಾದವರು ಉಪಸ್ಥಿತರಿದ್ದರು.



