ಮೈಸೂರು ಅರಮನೆಯನ್ನು ಊದು ಬತ್ತಿಯ ಉರಿದ ಕಡ್ಡಿಯಲ್ಲಿ ನಿರ್ಮಿಸಿದ ಕವಿ, ಸಾಹಿತಿ ಮೌನೇಶ್ ಆಚಾರ್ಯ ಕಡಂಬಾರ್.
ಅಕ್ಟೋಬರ್ 07, 2024
0
ಮೈಸೂರು ಅರಮನೆಯನ್ನು ಊದು ಬತ್ತಿಯ ಉರಿದ ಕಡ್ಡಿಯಲ್ಲಿ ನಿರ್ಮಿಸಿದ ಕವಿ, ಸಾಹಿತಿ ಮೌನೇಶ್ ಆಚಾರ್ಯ ಕಡಂಬಾರ್.
ಮಂಜೇಶ್ವರ : ದಸರ ಎಂದರೆ ಕನ್ನಡ ಜನತೆಗೆ ನಾಡ ಹಬ್ಬ ಅದರಲ್ಲೂ ಮೈಸೂರು ದಸರ ಇತಿಹಾಸ ಎನಿಸಿದೆ. ಈ ಸಂದರ್ಭದಲ್ಲಿ ಜಗಮಗಿಸಿ ಜಗತ್ತಿನ ಕಣ್ಮನ ಸೆಳೆಯುವ ಮೈಸೂರು ಅರಮನೆಯ ಬಗ್ಗೆ ಚಿತ್ರದಲ್ಲಾದರೂ ನೋಡದವರು ಯಾರೂ ಇರಲಾರರು. ಅಂತಹ ಅರಮನೆಯ ಪ್ರತಿಕೃತಿಯನ್ನು ಇಲ್ಲೋರ್ವ ಕವಿ ಭಾವದ ಕುಶಲ ಕರ್ಮಿಯೋರ್ವರು ಉರಿದು ಬಾಕಿ ಉಳಿದ ಊದು ಬತ್ತಿಯ ಕಡ್ಡಿಯ ಕಡೆ ಭಾಗವನ್ನು ಉಪಯೋಗಿಸಿ ಕೌಶಲ್ಯಯುತವಾಗಿ ನಿರ್ಮಿಸುವ ಮೂಲಕ ಈ ದಸರ ಸಂದರ್ಭದಲ್ಲಿ ಗಮನ ಸೆಳೆದಿದ್ದಾರೆ. ಮೂಲತಃ ಕಡಂಬಾರು ನಿವಾಸಿಯೂ ಮಂಜೇಶ್ಚರ ಶ್ರೀಮದ್ ಅನಂತೇಶ್ವರ ಕ್ಷೇತ್ರ ಮುಂಭಾಗದ ಚಿನ್ನ ಬೆಳ್ಳಿ ವ್ಯಾಪರಸ್ಥರು ಆಗಿರುವ ಮೌನೇಶ್ ಆಚಾರ್ಯರು ದಸರ ಸಂದರ್ಭಕ್ಕನುಗುಣವಾಗಿ ಈ ಕಲಾಕೃತಿ ನಿರ್ಮಿಸಿ ತಮ್ಮ ಅಂಗಡಿಯಲ್ಲೇ ಪ್ರದರ್ಶನಕ್ಕಿರಿಸಿದ್ದಾರೆ.
ಇವರು ಇದರ ನಿರ್ಮಾಣಕ್ಕಾಗಿ ಉಪಯೋಗಿಸಿರುವುದು ತನ್ನ ಹಾಗೂ ತನ್ಬ ಗೆಳೆಯನ ಅಂಗಡಿಯಲ್ಲಿ ಉರಿದು ಉಳಿದ ಊದುಬತ್ತಿಯ ಕಡೆ ಭಾಗವನ್ನಾಗಿದೆ. ಚಿನ್ನದ ಬಣ್ಣದಂತೆ ಕಣ್ಮನ ಸೆಳೆಯುವ ಈ ಕಲಾಕೃತಿ 10 ಇಂಚು ಅಗಲ 6 ಇಂಚು ಉದ್ದ ಇದೆ. ಸುಮಾರು 2 ಸಾವಿರ ಊದು ಬತ್ತಿಯ ಕಡ್ಡಿಗಳು ಇದರ ನಿರ್ಮಾಣಕ್ಕೆ ಉಪಯೋಗವಾಗಿದೆ. ಇನ್ನುಳಿದಂತೆ ಇದರ ಅಂದ ಹೆಚ್ಚಿಸಲು ಅಲಂಕಾರಿಕ ಮಾಲೆಯ ಮಣಿಯನ್ನು ಅರಮನೆಗೆ ಗುಂಜಬ್ ನಂತೆ ಇರಿಸಲಾಗಿದೆ.
ಅಡಿಭಾಗಕ್ಕೆ ಸಣ್ಣ ಪ್ಲೈವುಡ್ ತುಂಡು ಬಳಸಿ ಪೆವಿಕಾಲ್ ಗಮ್ ಉಯೋಗಿಸಿ ಕಡ್ಡಿಗಳನ್ನು ಜೋಡಿಸಲಾಗಿದೆ. ಅಂದ ಹೆಚ್ಚಿಸಲು ಹಾಗೂ ದೀರ್ಘ ಕಾಲ ಕಾಪಿಡುವ ಉದ್ದೇಶದಿಂದ ಟಚ್ ವುಡ್ ಬಳಸಲಾಗಿದೆ. ಸರಳವಾಗಿ ನಿರ್ಮಾಣ ಶೈಲಿಯಲ್ಲಿಯೇ ಗಮನ ಸೆಳೆಯುವ ಈ ಪ್ರತಿಕೃತಿಯ ನಿರ್ಮಾಣಕ್ಕೆ ತಮ್ಮ ಒಡನಾಡಿಗಳು ಪ್ರೋತ್ಸಾಹ ನೀಡಿರುವುದಾಗಿ ತಿಳಿಸಿದ್ದು ಈ ಹಿಂದೆ ಇವರು ಇಂತಹದೆ ಕಚ್ಛಾವಸ್ತುಗಳನ್ನು ಬಳಸಿಕೊಂಡು ಶಬರಿಮಲೆ, ಆಯೋಧ್ಯೆಯ ಶ್ರೀರಾಮ ಮಂದಿರ, ಮಂಜೇಶ್ವರ ರಥ ನಿರ್ಮಿಸಿದ್ದು ಜನಪ್ರಿಯವಾಗಿತ್ತು. ಮೌನೇಶ್ ಆಚಾರ್ಯರು ಈ ಹಿಂದೆ ಕೊಯಂಬುತ್ತೂರಿನಲ್ಲಿ ಅಕ್ಕಸಾಲಿಗ ವೃತ್ತಿ ನಿರ್ವಹಿಸಿದ್ದು ಅಲ್ಲಿ ಹಲವಾರು ಪ್ರತಿಕೃತಿ ರಚಿಸಿದ್ದರು ಇದೀಗ ಕಳೆದ 15 ವರ್ಷಗಳಿಂದ ಮಂಜೇಶ್ವರದಲ್ಲಿ ತಮ್ಮ ಚಿಕ್ಕಪ್ಪ ನಡೆಸುತ್ತಿದ್ದ ಕ್ಷೇತ್ರದ ಚಿನ್ನ ಬೆಳ್ಳಿ ಹರಕೆ ಸಮರ್ಪಣೆಯ ಅಂಗಡಿಯನ್ನು ಮುನ್ನಡೆಸುತ್ತಿದ್ದು ಕವಿತೆಗಳನ್ನು ಬರೆಯುವ ಮತ್ತು ಕವಿಗೋಷ್ಠಿಗಳಲ್ಲಿ ಭಾಗವಹಿಸುವ ಹವ್ಯಾಸಗಳನ್ನಿರಿಸಿಕೊಂಡಿದ್ದು ಜನಾನುರಾಗಿಯಾಗಿದ್ದಾರೆ.
ಚಿತ್ರ ಬರಹ : ಜಯ ಮಣಿಯಂಪಾರೆ +೯೧೯೮೯೫೭೬೯೨೭೭


