ವರ್ಕಾಡಿ ಗ್ರಾಮ ಪಂಚಾಯತ್ ಜನಪ್ರತಿನಿಧಿ, ಸಿಬ್ಬಂದಿಗಳ ಪ್ರವಾಸ - ಆರೋಪಗಳಿಗೆ ಸ್ಪಷ್ಟೀಕರಣ.
ಡಿಸೆಂಬರ್ 14, 2023
0
ವರ್ಕಾಡಿ ಗ್ರಾಮ ಪಂಚಾಯತ್ ಜನಪ್ರತಿನಿಧಿ, ಸಿಬ್ಬಂದಿಗಳ ಪ್ರವಾಸ - ಆರೋಪಗಳಿಗೆ ಸ್ಪಷ್ಟೀಕರಣ.
ವರ್ಕಾಡಿ : ವರ್ಕಾಡಿ ಗ್ರಾಮ ಪಂಚಾಯತಿನ ಜನಪ್ರತಿನಿಧಿಗಳು ಮತ್ತು ಸಿಬ್ಬಂದಿಗಳು ಕುಟುಂಬಸಮೇತ ನಡೆಸಿದ ವಯನಾಡು, ಊಟಿ ಪ್ರವಾಸದ ಕುರಿತು ಸಾಮಾಜಿಕ ಮಾಧ್ಯಮಗಳು ಮತ್ತು ಪತ್ರಿಕೆಗಳಲ್ಲಿ ಬಂದ ಆರೋಪಗಳಿಗೆ ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಸತೀಶ್ ಸ್ಪಷ್ಟೀಕರಣ ನೀಡಿದ್ದಾರೆ. ವರ್ಕಾಡಿ ಗ್ರಾಮ ಪಂಚಾಯತಿನ ಆಡಳಿತ ಮಂಡಳಿ ಸಭೆಯಲ್ಲಿ ಬಂದ ಪ್ರಸ್ತಾಪದಂತೆ ಗ್ರಾಮ ಪಂಚಾಯತ್ ಸದಸ್ಯರುಗಳು ಮತ್ತು ಸಿಬ್ಬಂದಿಗಳು ತಮ್ಮ ಸ್ವಂತ ಖರ್ಚಿನಲ್ಲಿ ವಯನಾಡು ಮತ್ತು ಊಟಿ ಪ್ರವಾಸ ಕೈಗೊಂಡಿದ್ದಾರೆ. ರಾಜಕೀಯ ವಿಚಾರಗಳಲ್ಲಿ ಸ್ಪಷ್ಟ ಹಾಗೂ ನಿಷ್ಠುರ ನಿಲುವು ಇರುವಾಗಲೂ, ಪಂಚಾಯತಿನ ಸಾಮಾನ್ಯ ಒಳಿತಿನ ಬಗ್ಗೆ ಸದಸ್ಯರು ಒಂದೇ ಕುಟುಂಬದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರವಾಸ ಕೈಗೊಳ್ಳಬೇಕಾದ ದಿನಾಂಕ, ಸ್ಥಳಗಳು, ಸಂಚರಿಸುವ ವಾಹನ, ಅಂದಾಜು ಖರ್ಚು ಬಗ್ಗೆ ಏಕಾಭಿಪ್ರಾಯ ಮೂಡಿದ ನಂತರ ಪ್ರವಾಸ ಕೈಗೊಳ್ಳುವ ತೀರ್ಮಾನ ಕೈಗೊಳ್ಳಲಾಗಿದೆ. ಜನಪ್ರತಿನಿಧಿಗಳು ಮತ್ತು ಸಿಬ್ಬಂದಿಗಳು ಪ್ರವಾಸ ಕೈಗೊಳ್ಳುವುದು ಇದು ಮೊದಲೇನೂ ಅಲ್ಲ, ಬಹುಶಃ ಕೊನೆಯದೂ ಆಗಿರಲಾರದು. ಸರಕಾರಗಳು ಪ್ರವಾಸೋದ್ಯಮ ತಾಣಗಳೆಂದು ಪರಿಗಣಿಸಿದ ಸ್ಥಳಗಳಿಗೆ ಸ್ವಂತ ವೆಚ್ಚದಲ್ಲಿ ಪ್ರವಾಸ ಕೈಗೊಳ್ಳಲು ಪ್ರತಿಯೋರ್ವರಿಗೂ ಸ್ವಾತಂತ್ರ್ಯವಿದೆ. ಆದರೆ ಈ ಪ್ರವಾಸಕ್ಕಾಗಿ ಕಲ್ಲಿನಕೋರೆ ಮಾಲಕರು, ಫ್ಯಾಕ್ಟರಿ ಮಾಲಕರು ಮತ್ತು ಗುತ್ತಿಗೆದಾರರಿಂದ ಹಣ ಸಂಗ್ರಹಿಸಲಾಗಿದೆ ಎಂಬ ಆರೋಪ ಆಧಾರ ರಹಿತ ಹಾಗೂ ಅಧಿಕಪ್ರಸಂಗಿತನವಾಗಿದೆ. ಟೂರ್ ಆಪರೇಟರ್ ಗಳು ವಿಧಿಸಿದ ವೆಚ್ಚವನ್ನು ಪ್ರತಿಯೋರ್ವರೂ ವೈಯಕ್ತಿಕವಾಗಿ ಭರಿಸಿದ್ದಾರೆ.
ವಯನಾಡು,ಊಟಿ ಮುಂತಾದೆಡೆ ಪ್ರವಾಸ ಕೈಗೊಂಡು ಮಸ್ತ್ ಮೋಜು ಮಾಡಿದ್ದಾರೆಂದು ಮಾಡಲಾದ ಆರೋಪ ಮಹಿಳೆಯರ ಘನತೆಗೆ ಹಾನಿ ಮಾಡುವ ದುರುದ್ದೇಶದಿಂದ ಕೂಡಿದೆ. ಇದು ದ್ವಯಾರ್ಥ ದ್ವನಿಸುವ ಕೊಳಕು ಆರೋಪವಾಗಿದೆ.
ಆರೋಪ ಹೊರಿಸಿದ ಪಿತೂರಿಕೋರರಿಗೆ ಪ್ರವಾಸವೆಂದರೆ ಕೇವಲ ಮಸ್ತ್, ಮೋಜು ಆಗಿರಬಹುದಾದರೂ ಎಲ್ಲರೂ ಅವರಂತೆ ಕೀಳು ಅಭಿರುಚಿಯವರಲ್ಲ.
ಸೀಮಿತ ಸದಸ್ಯರಿರುವ ವಾಟ್ಸಾಪ್ ಗ್ರೂಪ್ ನಲ್ಲಿ ಶೇರ್ ಮಾಡಲಾದ ಫೋಟೋಗಳನ್ನು ಗ್ರೂಪಿಗೆ ಸಂಬಂಧವಿಲ್ಲದ ವ್ಯಕ್ತಿಗಳು ಅನುಮತಿಯಿಲ್ಲದೆ ಕಂಡ ಕಂಡ ಕಡೆ ಶೇರ್ ಮಾಡಿದ್ದು ಆಕ್ಷೇಪಾರ್ಹವಾಗಿದೆ. ಕೈಲಾಗದ ಅಸೂಯೆಕೋರರು ಸೃಷ್ಟಿಸಿದ ಈ ಮಾನಹಾನಿಕರ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಕಾಸರಗೋಡು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಸೈಬರ್ ಅಪರಾಧ ವಿಭಾಗದ ತನಿಖೆಗೂ ಆಗ್ರಹಿಸಲಾಗಿದೆ. ತಪ್ಪಿತಸ್ತರನ್ನು ಕಾನೂನಿನ ಮುಂದೆ ತರಲು ಖಂಡಿತಾ ಶ್ರಮಿಸಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.

