ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡು ಬಳಿಯ ಮುಟ್ಟಂನಲ್ಲಿ ನಿನ್ನೆ ರಾತ್ರಿ ಉಂಟಾದ ವಾಹನ ಅಪಘಾತದಲ್ಲಿ ಮಂಜೇಶ್ವರ ಬಳಿಯ ಮಚ್ಚಂಪ್ಪಾಡಿ ನಿವಾಸಿ ಮಹಿಳೆ ಮೃತಪಟ್ಟು, ಐವರು ಗಾಯಗೊಂಡ ಘಟನೆ ನಡೆದಿದೆ. ಘಟನೆ ಬಗ್ಗೆ ಪೊಲೀಸರು ನೀಡಿದ ಮಾಹಿತಿ ಪ್ರಕಾರ ಥಾರ್ ಜೀಪು ಮತ್ತು ಆಲ್ಟೋ ಕಾರು ಢಿಕ್ಕಿಯಾಗಿ ಅಫಘಾತ ಸಂಭವಿಸಿದೆ. ಘಟನೆಯಲ್ಲಿ ಮಹಿಳೆ ಮೃತಪಟ್ಟಿದ್ದು, ಒಟ್ಟು ಐವರು ಗಾಯಗೊಂಡಿದ್ದು, ಈ ಪೖಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭಿಸಿದೆ. ಕಾಸರಗೋಡು ಭಾಗದಿಂದ ತಲಪಾಡಿ ಕಡೆಗೆ ಸಂಚರಿಸುತ್ತಿದ್ದ ಎರಡೂ ವಾಹನಗಳು ಆದಿತ್ಯವಾರ ರಾತ್ರಿ 7.45 ರ ವೇಳೆಗೆ ಒಂದರ ಬೆನ್ನಿಗೊಂದು ಬಡಿದು ಅಫಘಾತ ಸಂಭವಿಸಿದೆ. ಈ ಪೈಕಿ ಆಲ್ಟೋ ಕಾರಿನಲ್ಲಿದ್ದ ಮಂಜೇಶ್ವರ ಬಳಿಯ ಮಚ್ಚಂಪಾಡಿ ನಿವಾಸಿ ಹುಸೈನ್ ಸಹದಿ ಎಂಬವರ ಪತ್ನಿ ಮಿರ್ಝಾನ (28) ಮೃತಪಟ್ಟ ಮಹಿಳೆಯಾಗಿದ್ದಾರೆ. ಇವರ ಜತೆಗಿದ್ದ ಸಹ ಪ್ರಯಾಣಿಕರಾದ ಹುಸೖನ್ ಸಹದಿ (34), ಮರಿಯಮ್ಮತ್ ಝಕ್ಕಿಯ್ಯ (15), ಝುಮಾನ (19), ಹಾಗೂ ಅಬ್ದುಲ್ ಸಾಲಿಂ (3)
ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಸ್ತೆಯಲ್ಲಿ ಚಲಿಸುತ್ತಿದ್ದ ಥಾರ್ ಜೀಪು ದಿಢೀರನೆ ಬ್ರೇಕ್ ಹಾಕಿದಾಗ ಹಿಂಭಾಗದಲ್ಲಿದ್ದ ಕಾರು ಚಾಲಕನ ನಿಯಂತ್ರಣಕ್ಕೆ ಸಿಗದೇ ಬಡಿದು ದುರಂತ ಸಂಭವಿಸಿದೆ ಎಂದು ಸ್ಥಳೀಯರ ಮಾತಾಗಿದೆ.
