ಗಡಿನಾಡ ಕನ್ನಡಿಗರ ಸಾಕ್ಷಿ ಪ್ರಜ್ಞೆ ದಿನೇಶ್ ವಿ.ಇನ್ನು ನೆನಪು ಮಾತ್ರ...! ✍️ಹರ್ಷಾದ್ ವರ್ಕಾಡಿ.
ಜೂನ್ 14, 2025
0
ಗಡಿನಾಡ ಕನ್ನಡಿಗರ ಸಾಕ್ಷಿ ಪ್ರಜ್ಞೆ ದಿನೇಶ್ ವಿ.ಇನ್ನು ನೆನಪು ಮಾತ್ರ...!
✍️ಹರ್ಷಾದ್ ವರ್ಕಾಡಿ.
ಮೇಲ್ನೋಟಕ್ಕೆ ಸದಾ ಮೌನಿ... ಗಾಂಭೀರ್ಯತೆ.. ಆದರೆ ಹತ್ತಿರದಿಂದ ಮಾತನಾಡಿಸಿ ನೋಡಿದರೆ ಮಗು ಹೃದಯ.. ನಿಷ್ಕಲ್ಮಶ ಮನಸ್ಸು.. ಕಾರುಣ್ಯಮಯೀ ವ್ಯಕ್ತಿತ್ವ..
ಮೇ 13 ಶುಕ್ರ
ವಾರದಂದು ನಮ್ಮನ್ನಗಲಿದ ನಿವೃತ್ತ DDE ದಿನೇಶ್ ವಿ. ರವರನ್ನು ಬಲ್ಲವರಿಗೆ ಈ ವ್ಯಕ್ತಿತ್ವ ಸುಪರಿಚಿತ.
1996ರಲ್ಲಿ ಕುಂಜತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಶಾಲೆಗೆ ಸೇರಿದಲ್ಲಿಂದ ಮೊದಲ್ಗೊಂಡು 2025ರ ಮೇ 31 ರಂದು ತಿರುವನಂತಪುರದ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ ವಿರಮಿಸುವ ತನಕದ ಅವರ ವೃತ್ತಿ ಬದುಕಿನಲ್ಲಿ ಅವರು ಸಂಪಾದಿಸಿದ್ದು ಅಪಾರ ಮಂದಿಯ ಪ್ರೀತಿ ಮತ್ತು ಗೌರವವನ್ನಾಗಿತ್ತು .
ಎಡನೀರು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಭಡ್ತಿಕೊಂಡು ಆ ಬಳಿಕ ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿಯಾಗಿ, ಅಲ್ಲಿಂದ ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿಯಾಗಿ ನಿವೃತ್ತಿ ಹೊಂದುವ ವೇಳೆ ತಿರುವನಂತಪುರ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸುದೀರ್ಘ 29 ವರ್ಷಗಳ ಸೇವೆಯನ್ನು ಸಲ್ಲಿಸಿರುವುದು ವೃತ್ತಿ ಬದುಕಿನ ಚೈತ್ರ ಯಾತ್ರೆ...
ನಿವೃತ್ತಿ ಹೊಂದಿದ ಕೆಲವೇ ದಿನಗಳಲ್ಲಿ ದಿನೇಶ್ ನಮ್ಮನ್ನಗಲಿದ್ದಾರೆ. ಗಡಿನಾಡ ಕನ್ನಡಿಗರಿಗೆ ಪ್ರತಿಯೊಂದು ಹಂತದಲ್ಲಿಯೂ ಆಶಾಕಿರಣರಾಗಿದ್ದ ದಿನೇಶ್ ರವರು ವಿದ್ಯಾರ್ಥಿಗಳ, ಅಧ್ಯಾಪಕ ವೃಂದದವರ ಹಾಗೂ ಸಾರ್ವಜನಿಕರ ಅಪಾರ ಪ್ರೀತಿ ಮತ್ತು ಮೆಚ್ಚುಗೆಗೆ ಪಾತ್ರರಾಗಿದ್ದವರು. ವಾರಗಳ ಹಿಂದೆಯಷ್ಟೇ ಸಾಯಂಕಾಲ ಹೊತ್ತಿಗೆ ಅವರ ಮನೆಗೆ ಭೇಟಿಕೊಟ್ಟು ಅವರ ಜೊತೆ ಕುಶಲೋಪಚಾರದಲ್ಲಿ ತೊಡಗಿ, ಒಟ್ಟಿಗೆ ಕಾಫಿ ಕುಡಿದು ಹಿಂತಿರುಗಿದ್ದು ನನ್ನ ಪಾಲಿಗೆ ಅವಿಸ್ಮರಣೀಯ. ಇದೀಗ ಅವರು ನಮ್ಮನ್ನು ಅಗಲಿ ಹೋದದ್ದನ್ನು ಅರಗಿಸಲು ಸಾಧ್ಯವಾಗುತ್ತಿಲ್ಲ. ಇಂತಹ ನೆನಪುಗಳು ಗಡಿನಾಡಿನ ಪ್ರತಿಯೊಬ್ಬ ಕನ್ನಡಿಗರಿಗೂ ಇದೆ ಎಂಬುದು ಅಕ್ಷರಶ: ಸತ್ಯ. ಅಗಲಿದ ದಿನೇಶ್ ರವರಿಗೆ ನುಡಿನಮನಗಳು..!
✍️ಹರ್ಷಾದ್ ವರ್ಕಾಡಿ.


