ವಾಮಂಜೂರು ಚೆಕ್ ಪೋಸ್ಟ್ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ಇಂದು ಅಪರಾಹ್ನ.
ಮಾರ್ಚ್ 04, 2025
0
ವಾಮಂಜೂರು ಚೆಕ್ ಪೋಸ್ಟ್ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ಇಂದು ಅಪರಾಹ್ನ.
ಮಂಜೇಶ್ವರ: ನಿನ್ನೆ ರಾತ್ರಿ ರಾಷ್ಟ್ರೀಯ ಹೆದ್ದಾರಿ ವಾಮಂಜೂರು ಚೆಕ್ ಪೋಸ್ಟ್ ನ ಸೇತುವೆಯ ಬಳಿ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು, ಭೀಕರತೆಯನ್ನು ಸೃಷ್ಟಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟವರ ಮಾಹಿತಿ ಲಭ್ಯವಾಗಿದೆ. ಪೈವಳಿಕೆ ಗ್ರಾಮ ಪಂಚಾಯತ್ ಗೊಳಪಟ್ಟ ಬಾಯಿಕಟ್ಟೆ ಬಳಿಯ ಮಂಜಲ್ತೋಡಿ ನಿವಾಸಿ ಸಿಪಿಐ ಪಕ್ಷದ ಕಾರ್ಯಕರ್ತ ಜನಾರ್ಧನ (55), ಪುತ್ರ ಅರುಣ್ (23) ಹಾಗೂ ಕಾರು ಚಲಾಯಿಸುತ್ತಿದ್ದ ಹೊಸಂಗಡಿ ಮೂಡಂಬೈಲು ನಿವಾಸಿ ಕಿಶನ್ (27) ಎಂಬವರು ಮೃತಪಟ್ಟವರಾಗಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಉಪ್ಪಿನಂಗಡಿ ನಿವಾಸಿ ರತನ್ ಎಂಬವರು ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ತಂದೆ ಮಗ ಸೇರಿ ನಾಲ್ಕು ಮಂದಿ ನಿನ್ನೆ ರಾತ್ರಿ ಬಾಯಿಕಟ್ಟೆಯಿಂದ ಮಂಗಳೂರಿಗೆ ಕಾರಿನಲ್ಲಿ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ. ವಾಮಂಜೂರು ಚೆಕ್ ಪೋಸ್ಟ್ ಸಮೀಪಿಸುತ್ತಿದ್ದಂತೆ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದು ಅಪಘಾತ ನಡೆದಿದೆ. ಮೃತಪಟ್ಟವರ ಪೈಕಿ ಜನಾರ್ಧನ ಬಾಯಿಕಟ್ಟೆ ಬಳಿಯ ಮಂಜಲ್ತೋಡಿ ನಿವಾಸಿ ದಿ. ಕಣ್ಣಪ್ಪ ಬೆಲ್ಚಪ್ಪಾಡ - ದಿ. ರಾಜೀವಿ ದಂಪತಿ ಪುತ್ರರಾಗಿದ್ದು, ಊರಿನಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿದ್ದರು. ಜನಾರ್ಧನ ಮತ್ತು ಪುತ್ರ ಅರುಣ್ ರ ಸಾವಿನಿಂದಾಗಿ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ಜನಾರ್ಧನರವರು ಪತ್ನಿ: ವನಜ (ಪೈವಳಿಕೆ ಅಂಗನವಾಡಿ ಕಾರ್ಯಕರ್ತೆ), ಮಕ್ಕಳಾದ: ಕಿರಣ್ ಹಾಗೂ ಓರ್ವೆ ಪುತ್ರಿ, ಸಹೋದರ ಸಹೋದರಿಯರಾದ: ಶಾಂಭವಿ, ಕೇಶವ, ಶಾರದಾ, ಪ್ರಕಾಶ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಜನಾರ್ಧನರ ಪುತ್ರ ಮೃತಪಟ್ಟ ಅರುಣ್ ಊರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ. ಇದೀಗ ಮೂವರ ಮೃತದೇಹವು ಶವ ಮಹಜರಿಗಾಗಿ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ನಡೆದು, ಅಂತ್ಯಕ್ರಿಯೆ ಇಂದು ಅಪರಾಹ್ನ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಘಟನೆಯಲ್ಲಿ ಅಸುನೀಗಿದ ಸಿಪಿಐ ಪಕ್ಷದ ಕಾರ್ಯಕರ್ತ ಜನಾರ್ಧನ್ ಹಾಗೂ ಪುತ್ರ ಅರುಣ್ ಮತ್ತು ಜತೆಗಿದ್ದ ಕಿಶನ್ ರ ನಿಧನಕ್ಕೆ ಸಿಪಿಐ ಪೈವಳಿಕೆ ಲೋಕಲ್ ಕಮಿಟಿ, ಸಿಪಿಐ ಬಾಯಿಕಟ್ಟೆ ಬ್ರಾಂಚ್ ಕಮಿಟಿ, ಎ. ಐ. ಟಿ. ಯು.ಸಿ ಪೈವಳಿಕೆ ಪಂಚಾಯತ್ ಸಮಿತಿ, ವಿಷ್ಣುಮೂರ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಬಾಯಿಕಟ್ಟೆ ಗಾಢವಾದ ಸಂತಾಪ ಸೂಚಿಸಿದ್ದಾರೆ.



