Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಂಪು ಕಾಸರಗೋಡಿನ ಮನೆ ಮನಗಳಲ್ಲಿ ಹರಡಬೇಕು - ಪ್ರೊ| ಶ್ರೀನಾಥ್

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಂಪು ಕಾಸರಗೋಡಿನ ಮನೆ ಮನಗಳಲ್ಲಿ ಹರಡಬೇಕು - ಪ್ರೊ| ಶ್ರೀನಾಥ್.
ಮಂಜೇಶ್ವರ: ಡಿಸೆಂಬರ್ 20 ರಿಂದ 22 ರ ತನಕ ಮೂರು ದಿವಸಗಳ ಕಾಲ ಮಂಡ್ಯದಲ್ಲಿ ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಂಪು ಕಾಸರಗೋಡಿನ ಮನೆ ಮನಗಳಲ್ಲಿ ಹರಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರೊ ಶ್ರೀನಾಥ್ ಕರೆ ನೀಡಿದರು. ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಾರ್ಥ ಕನ್ನಡ ಸಂಸ್ಕೃತಿ ಇಲಾಖೆ ಆಯೋಜಿಸಿರುವ ಕನ್ನಡ ಸಾಹಿತ್ಯ ತೇರು ರಥವು ಕಾಸರಗೋಡು ಜಿಲ್ಲೆಗೆ ಆಗಮನದ ಅಂಗವಾಗಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ನಿವಾಸ ಗಿಳಿವಿಂಡುವಿಗೆ ಆಗಮಿಸಿದಾಗ ನೀಡಿದ ಹೃದಯಸ್ಪರ್ಶಿ ಸ್ವಾಗತ ಕಾರ್ಯಕ್ರಮದಲ್ಲಿ ಮಂಜೇಶ್ವರ ರಾಷ್ಟ್ರಕವಿ ಗೋವಿಂದ ಪೈಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ನೆರೆದ ಕನ್ನಡಿಗರನುದ್ದೇಶಿಸಿ ಮಾತನಾಡಿದರು.
ಕನ್ನಡವು ಮಣ್ಣಿನ ಭಾಷೆ. ಜನಕೋಟಿಗಳ ಹೃದಯದ ಭಾಷೆ. ಜೀವಂತಿಕೆಯ ಸಂವಹನದ ಭಾಷೆಯಾಗಿದ್ದು, ಸಾಹಿತ್ಯದ ರಥಕ್ಕೆ ಮಂಜೇಶ್ವರದ ಮಣ್ಣಿನಲ್ಲಿ ನೀಡಿದ ಸ್ವಾಗತವು ಕರ್ನಾಟಕ - ಕಾಸರಗೋಡಿನ ಅವಿನಾಭಾವ ಬೆಸುಗೆಗೆ ಸಾಕ್ಷಿಯಾಗಿದೆ. ಮಲೆಯಾಳಿಕರಣದ ನಡುವೆಯೂ ಕಾಸರಗೋಡಿನಲ್ಲಿ ಕನ್ನಡಾಂಬೆಯು ಇನ್ನು ಕನ್ನಡಿಗರ ಕಣ್ಮಣಿಯಾಗಿರುವುದು ನಿಜಕ್ಕೂ ಅನುಪಮ ಆನಂದವನ್ನು ನೀಡುತ್ತಿದೆ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಕವಿಯೊಬ್ಬರ ಯಕ್ಷಗಾನದ ಈ ನೆಲದಲ್ಲಿ ಕನ್ನಡದ ಕೈಂಕರ್ಯ ಇನ್ನಷ್ಟು ಸೊಗಸಾಗಿ ಬೆಳೆದು ಬರಲಿ ಎಂದು ಹಾರೈಸಿದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷರಾದ ಕೆ.ಆರ್ ಜಯಾನಂದರವರು ರಥದಲ್ಲಿದ್ದ ಭುವನೇಶ್ವರಿ ಮಾತೆಯ ಪ್ರತಿಮೆಗೆ ಹಾರಾರ್ಪಣೆ ಮಾಡಿ ಭವ್ಯವಾಗಿ ಸ್ವಾಗತಿಸಿದರು. ಗಮಕ ಸಾಹಿತ್ಯ ಪರಿಷತ್ ಅಧ್ಯಕ್ಷ ತೆಕ್ಕೆಕೆರೆ ಶಂಕರ ನಾರಾಯಣ ಭಟ್, ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ ಸಿ.ಕೆ, ಮಂಜೇಶ್ವರ ಗೋವಿಂದ ಪೈ ಟ್ರಸ್ಟ್ ಕಾರ್ಯದರ್ಶಿ ಉಮೇಶ್ ಸಾಲ್ಯಾನ್, ಸಾಮಾಜಿಕ ಕಾರ್ಯಕರ್ತರಾದ ಹರೀಶ್ಚಂದ್ರ ಮಂಜೇಶ್ವರ, ಆದರ್ಶ್ ಬಿ.ಎಂ, ಅಶ್ವತ್ಥ್ ಪೂಜಾರಿ ಲಾಲ್ಬಾಗ್, ಸಂಕಬೈಲ್ ಸತೀಶ್ ಅಡಪ, ವರ್ಕಾಡಿ ಚರ್ಚ್ ನ ಫಾದರ್ ಬೇಸಿಲ್ ವಾಸ್ ಸೇರಿದಂತೆ ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ರಂಗದ ಪ್ರತಿನಿಧಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಮುಂಚಿತ ರಥವು ಕೇರಳಕ್ಕೆ ಆಗಮಿಸಲು ತಲಪಾಡಿಗೆ ತಲುಪಿದಾಗ ಮಂಜೇಶ್ವರ ಉಪಜಿಲ್ಲಾ ಮುಖ್ಯೋಪಾಧ್ಯಾಯರ ವೇದಿಕೆಯ ಕಾರ್ಯದರ್ಶಿ ಶ್ಯಾಮ್ ಭಟ್ ಪೈವಳಿಕೆ ತಾಯಿ ಭುವನೇಶ್ವರಿಗೆ ಹೂ ಹಾರ ಹಾಕಿದರು. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ| ಶ್ರೀನಾಥ್ ರವರು ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿಯವರಿಗೆ ಕನ್ನಡಾಂಬೆಯ ಧ್ವಜವನ್ನು ಹಸ್ತಾಂತರಿಸಿ, ಹಾರಿಸುವ ಮೂಲಕ ಕೇರಳ ಭಾಗಕ್ಕೆ ರಥ ಸಾಗಿ ಬರಲು ಚಾಲನೆ ನೀಡಿದರು. ಬಳಿಕ ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿಯವರು ನಿರ್ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.