ಚರಂಡಿ ನಿರ್ಮಾಣದಲ್ಲಿ ಪುರಸಭೆಯಿಂದ ಕಳಪೆ ಕಾಮಗಾರಿ. ಅರ್ಧದಲ್ಲಿ ಮೊಟಕುಗೊಳಿಸಿ ತೆರಳಿದ ಗುತ್ತಿಗೆದಾರ. ಬಾಯ್ದೆರೆದು ಅಪಾಯ ಸ್ಥಿತಿಯಲ್ಲಿದ್ದ ಚರಂಡಿಗೆ ಬಿದ್ದ ಗ್ಯಾಸ್ ಸಿಲಿಂಡರ್ ಹೇರಿದ ಟೆಂಪೋ. ಸ್ಥಳೀಯ ಸಾಮಾಜಿಕ ಕಾರ್ಯಕರ್ತನ ವೆಚ್ಚದಲ್ಲಿ ಕಾಮಗಾರಿ ಪೂರ್ಣ. ಮುಂದಿನ ಬಾರಿ ವಾರ್ಡ್ ಚುನಾವಣೆಯನ್ನು ಬಹಿಷ್ಕರಿಸಲು ನಾಗರಿಕರ ನಿರ್ಧಾರ.
ಅಕ್ಟೋಬರ್ 29, 2024
0
ಚರಂಡಿ ನಿರ್ಮಾಣದಲ್ಲಿ ಪುರಸಭೆಯಿಂದ ಕಳಪೆ ಕಾಮಗಾರಿ. ಅರ್ಧದಲ್ಲಿ ಮೊಟಕುಗೊಳಿಸಿ ತೆರಳಿದ ಗುತ್ತಿಗೆದಾರ. ಬಾಯ್ದೆರೆದು ಅಪಾಯ ಸ್ಥಿತಿಯಲ್ಲಿದ್ದ ಚರಂಡಿಗೆ ಬಿದ್ದ ಗ್ಯಾಸ್ ಸಿಲಿಂಡರ್ ಹೇರಿದ ಟೆಂಪೋ. ಸ್ಥಳೀಯ ಸಾಮಾಜಿಕ ಕಾರ್ಯಕರ್ತನ ವೆಚ್ಚದಲ್ಲಿ ಕಾಮಗಾರಿ ಪೂರ್ಣ. ಮುಂದಿನ ಬಾರಿ ವಾರ್ಡ್ ಚುನಾವಣೆಯನ್ನು ಬಹಿಷ್ಕರಿಸಲು ನಾಗರಿಕರ ನಿರ್ಧಾರ.
ಪುತ್ತೂರು: ಪುತ್ತೂರು ಪುರಸಭೆಗೆ ಒಳಪಟ್ಟ 14 ನೇ ವಾರ್ಡ್ ಹಾರಡಿಯಲ್ಲಿ ಚರಂಡಿಯನ್ನು ಅಗೆದು ತೆಗೆದು ಕಳಪೆ ಕಾಮಗಾರಿ ನಡೆಸಿ, ಸ್ಲ್ಯಾಬ್ ಹಾಕದೇ ಹಿಂತಿರುಗಿದ ಘಟನೆ ನಡೆದಿದ್ದು, ಕೊನೆಗೆ ಅಪಾಯ ತಂದೊಡ್ಡುವ ಚರಂಡಿಗೆ ಸ್ಥಳೀಯ ಸಮಾಜ ಸೇವಕರೊಬ್ಬರು ತಮ್ಮ ಕೈಯಿಂದಲೇ ಹಣ ಸುರಿದು ಚರಂಡಿಯ ಕಾಮಗಾರಿ ಪೂರ್ತಿಗೊಳಿಸಿ, ಚರಂಡಿಯ ಮೇಲ್ಮೈಗೆ ಸ್ಲ್ಯಾಬ್ ಹಾಕಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಘಟನೆ ನಡೆದಿದೆ. ಹಾರಾಡಿಯಿಂದ - ಮೂಕಾಂಬಿಕಾ ಗ್ಯಾಸ್ ಏಜೆನ್ಸಿ ಮೂಲಕ ಬನ್ನೂರಿಗೆ ತೆರಳುವ ಸುಮಾರು 500 ಮೀಟರ್ ಕಾಂಕ್ರೀಟ್ ರಸ್ತೆಯ ಪಕ್ಕವೇ ಚರಂಡಿಯೊಂದು ಇದ್ದು, ಮಳೆಗಾಲದಲ್ಲಿ ಚರಂಡಿಯಲ್ಲಿ ಹರಿಯುವ ನೀರು, ಚರಂಡಿಯಲ್ಲಿ ಕಸಕಡ್ಡಿಗಳು ತುಂಬಿದ ಕಾರಣ, ಚರಂಡಿಯಲ್ಲಿ ಸಾಗದೆ, ರಸ್ತೆಯಲ್ಲಿಯೇ ಹರಿಯುತ್ತಿತ್ತು. ಈ ಬಗ್ಗೆ ದೂರನ್ನು ಆಲಿಸಿದ ಪುತ್ತೂರು ಪುರಸಭೆ ಟೆಂಡರ್ ಕರೆದು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಚರಂಡಿಯ ದುರಸ್ತಿ ಕಾಮಗಾರಿ ಕಳೆದ ಒಂದು ತಿಂಗಳಿನಿಂದ ಆರಂಭಿಸಿದ್ದರು. ರಸ್ತೆಯ ಕೆಲವು ಭಾಗದಲ್ಲಿ ಚರಂಡಿ ಕಾಮಗಾರಿ ನಡೆಸಿದರೂ, ಶ್ರೀ ಕಲ್ಲುರ್ಟಿ ಸನ್ನಿಧಿಯ ಎದುರಿಗೆ ಚರಂಡಿ ಕಾಮಗಾರಿಯನ್ನು ವಿದ್ಯುತ್ ಕಂಬದ ನೆಪ ಒಡ್ಡಿ ಅರ್ಧದಲ್ಲಿ ನಿಲ್ಲಿಸಿ ತೆರಳಿದ್ದರು. ಇಲ್ಲಿ ಚರಂಡಿಯ ಹೊಂಡವನ್ನು ಅಗೆದು ತೆಗೆದು, ಕಾಮಗಾರಿ ನಡೆಸದೆ, ಹಾಗೇನೇ ಬಿಟ್ಟು ಹೋಗಿದ್ದರಿಂದ ಬಾಯ್ದೆರೆದು ನಿಂತ ಚರಂಡಿ ಅಪಾಯವನ್ನು ತಂದೊಡ್ಡಿತ್ತು. ಈ ಬಗ್ಗೆ ಗುತ್ತಿಗೆ ವಹಿಸಿದ ಟೆಂಡರ್ ದಾರನಿಗೆ ಸ್ಥಳೀಯರು ಕೇಳಿದಾಗ ಚರಂಡಿಯ ಪಕ್ಕದಲ್ಲಿ ವಿದ್ಯುತ್ ಕಂಬವಿದೆ. ವಿದ್ಯುತ್ ಇಲಾಖೆಯವರಿಗೆ ಮಾಹಿತಿ ನೀಡಿದರೂ, ಕಂಬ ತೆರವುಗೊಳಿಸದ ಕಾರಣ ಚರಂಡಿಯ ಕೆಲಸ ಪೂರ್ತಿಗೊಳಿಸಲು ಅಸಾಧ್ಯವೆಂದರು. ಅಲ್ಲದೇ ಚರಂಡಿಗೆಂದು ಮಣ್ಣು ತೆಗೆದ ಬಳಿಕ ಚರಂಡಿ ಕಾಮಗಾರಿ ಪೂರ್ತಿಗೊಳಿಸದೆ, ಹಾಗೆ ತೆರಳಿದ್ದರು. ಈ ನಡುವೆ ಗ್ಯಾಸ್ ಏಜೆನ್ಸಿಯ ಸಿಲಿಂಡರ್ ಹೇರಿದ ಟೆಂಪೋ ರಸ್ತೆಯಲ್ಲಿ ಸಂಚರಿಸುವ ವೇಳೆ ಎದುರಿನಿಂದ ಬರುವ ವಾಹನಕ್ಕೆ ಸೈಡ್ ಕೊಡುವ ವೇಳೆ ಇದೇ ಚರಂಡಿಗೆ ಗಾಡಿ ಬಿದ್ದ ಘಟನೆ ಕೂಡಾ ನಡೆದಿತ್ತು. ಈ ಎಲ್ಲಾ ಘಟನೆ ಬಗ್ಗೆ ಸ್ಥಳೀಯರು ವಾರ್ಡ್ ಸದಸ್ಯೆಯಲ್ಲಿ ತಿಳಿಸಿದರೂ ತನಗೆ ಇದರಲ್ಲಿ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ನಾಗರಿಕರ ಆರೋಪವಾಗಿದೆ. ಈ ಬಗ್ಗೆ ಸ್ಥಳೀಯರು ಕಾಲ್ ಕರೆ ಮಾಡಿ ಅಪಾಯ ತಂದೊಡ್ಡುವ, ಅರ್ಧದಲ್ಲಿ ನಿಂತು ಹೋಗಿರುವ ಚರಂಡಿಯ ಕಾಮಗಾರಿಯನ್ನು ಪೂರ್ತಿಗೊಳಿಸಿ, ಚರಂಡಿಗೆ ಸ್ಲ್ಯಾಬ್ ಹಾಕಿಸಿ ಅಪಾಯದಿಂದ ಪಾರು ಮಾಡಲು ತಿಳಿಸಿದರೂ ವಾರ್ಡ್ ಸದಸ್ಯೆ ಈ ಬಗ್ಗೆ ಯಾವುದೇ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಕೊನೆಗೆ ಅಪಾಯ ತಂದೊಡ್ಡುವ ಚರಂಡಿಗೆ ಮುಕ್ತಿ ಹೊಂದಲು ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಗುಡ್ಡೆಮನೆ ವಿಶ್ವನಾಥ ಆಚಾರ್ಯರು ತಮ್ಮ ಕೈಯಿಂದಲೇ ಸಾವಿರಾರು ರುಪಾಯಿ ಹಣ ಸುರಿದು, ಚರಂಡಿಯನ್ನು ದುರಸ್ತಿಗೊಳಿಸಿ, ಅದರ ಮೇಲ್ಮೈಗೆ ಸುಮಾರು 16 ಕ್ಕೂ ಅಧಿಕ ಸ್ಲ್ಯಾಬ್ ಹಾಸಿ, ಕಾಮಗಾರಿಯನ್ನು ಪೂರ್ತಿಗೊಳಿಸಿ, ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ವಿಶ್ವನಾಥ ಆಚಾರ್ಯರ ಸಕಾಲ ಕಾರ್ಯವು ಸರ್ವರ ಪ್ರಶಂಸೆಗೊಳಪಟ್ಟಿದೆ. ಚರಂಡಿ ಕಾಮಗಾರಿಯನ್ನು ಅರ್ಧದಲ್ಲಿ ಮೊಟಕುಗೊಳಿಸಿ, ಕಳಪೆ ಕಾಮಗಾರಿ ನಡೆಸಿ, ಹಿಂತಿರುಗಿದ ಪುತ್ತೂರು ಪುರಸಭೆ ವಿರುದ್ಧ ಹಾಗೂ ವಾರ್ಡ್ ಸದಸ್ಯೆಯ ದುರ್ನಡೆತೆಯ ವರ್ತನೆಗೆ ಮುಂದಿನ ಬಾರಿಯ ವಾರ್ಡ್ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಸ್ಥಳೀಯರು ನಿರ್ಧರಿಸಿದ್ದು, ಮುಂದಿನ ವಾರ್ಡ್ ಚುನಾವಣೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಮತದಾರರ ಮನವೊಳಿಸಲು ಯಾವುದೇ ರಾಜಕೀಯ ಪಕ್ಷಗಳು ತಮ್ಮ ಧೀಮಂತ ವ್ಯಕ್ತಿಗಳ ಜೊತೆ ಮತ ಕೇಳಲು ಮನೆಗೆ ಬಂದರೆ ಕೂಡಾ ಅವರ ವಿರುದ್ಧ ತಕ್ಕ ಉತ್ತರ ನೀಡಲು ಇಲ್ಲಿಯ ಮತದಾರರು ಸಿದ್ಧರಾಗಿ ನಿಂತಿದ್ದಾರೆ. ಅಲ್ಲದೇ ಮತವನ್ನು ಆಕದೆ ಈ ಬಾರಿ ದಿಟ್ಟ ನಿರ್ಧಾರ ಕೈಗೊಳ್ಳಲು ಪರಿಸರದ ನಾಗರಿಕರು ತೀರ್ಮಾನಿಸಿದ್ದಾರೆ.




