ಸೋಮೇಶ್ವರ ಕಡಲಲ್ಲಿ ಸ್ನಾನಕ್ಕಿಲಿದ 6 ಮಂದಿ ಪಿಯು ವಿದ್ಯಾರ್ಥಿಗಳ ಪೈಕಿ ಕುಂಜತ್ತೂರು ನಿವಾಸಿಗಳಿಬ್ಬರು ನೀರುಪಾಲು. ಆತಂಕದಲ್ಲಿ ಮನೆ ಮಂದಿ.
ಡಿಸೆಂಬರ್ 09, 2023
0
ಮಂಜೇಶ್ವರ: ಕೋಟೆಕಾರು ಬಳಿಯ ಸೋಮೇಶ್ವರ ಸೋಮನಾಥ ದೇವಸ್ಥಾನದಲ್ಲಿ ಮಧ್ಯಾಹ್ನದ ಅನ್ನ ಪ್ರಸಾದ ಸ್ವೀಕರಿಸಿ ಸಮುದ್ರದಲ್ಲಿ ನೀರಾಟಕ್ಕಿಳಿದ ಆರು ಮಂದಿ ಪಿಯು ವಿದ್ಯಾರ್ಥಿಗಳಲ್ಲಿ ಇಬ್ಬರು ನೀರು ಪಾಲಾದ ಘಟನೆ ಇಂದು ಮದ್ಯಾಹ್ನ ನಡೆದಿದೆ.
ಸೋಮೇಶ್ವರದ ಪರಿಜ್ನಾನ ಪಿ.ಯು ಕಾಲೇಜಿನ ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಾದ ಮಂಜೇಶ್ವರ ಬಳಿಯ ಕುಂಜತ್ತೂರು ಅಡ್ಕ ನಿವಾಸಿ ಶೇಖರ - ಮೀನಾಕ್ಷಿ ದಂಪತಿಗಳ ಪುತ್ರ ಯಶ್ವಿತ್ (17) ಮತ್ತು ಕುಂಜತ್ತೂರು ಮಜಲ್ ನಿವಾಸಿ ಜಯೇಂದ್ರ - ಚಿತ್ರ ದಂಪತಿ ಪುತ್ರ ಯುವರಾಜ್ (17) ಸಮುದ್ರ ಪಾಲಾದ ವಿದ್ಯಾರ್ಥಿಗಳು. ಇಂದು ಮದ್ಯಾಹ್ನ ನಂತರ ಯಶ್ವಿತ್ ಮತ್ತು ಯುವರಾಜ್ ಸೇರಿ ಒಟ್ಟು ಆರು ವಿದ್ಯಾರ್ಥಿಗಳು ಸೋಮನಾಥ ದೇವಸ್ಥಾನದಲ್ಲಿ ಅನ್ನ ಪ್ರಸಾದ ಸ್ವೀಕರಿಸಿ ಸಮೀಪದ ಕಡಲ ಕಿನಾರೆಯಲ್ಲಿ ಸ್ನಾನ ಮಾಡಲು ಇಳಿದಿದ್ದಾರೆ. ಈ ವೇಳೆ ಯಶ್ವಿತ್ ಮತ್ತು ಯುವರಾಜ ನನ್ನು ಕಡಲಿನ ಅಲೆಗಳು ಎಳೆದುಕೊಂಡು ಹೋಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ಈಜು ತಜ್ನರು ಭೇಟಿ ನೀಡಿದ್ದು ನೀರು ಪಾಲಾದ ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




