ಆಸೆ, ಆಮಿಷಗಳಿಲ್ಲದೆ ಕನ್ನಡದ ಪತ್ರಕರ್ತರು ಕನ್ನಡ ಭಾಷೆ, ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ. - ಕೆ.ವಿ.ಪ್ರಭಾಕರ್. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ದತ್ತಿನಿಧಿ ಪ್ರಶಸ್ತಿ ಪ್ರಧಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವಕ್ಕೆ ಸೀತಂಗೋಳಿಯಲ್ಲಿ ಸಂಪನ್ನ.
ಜುಲೈ 13, 2024
0
ಆಸೆ, ಆಮಿಷಗಳಿಲ್ಲದೆ ಕನ್ನಡದ ಪತ್ರಕರ್ತರು ಕನ್ನಡ ಭಾಷೆ, ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ
ದತ್ತಿನಿಧಿ ಪ್ರಶಸ್ತಿ ಪ್ರಧಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವಕ್ಕೆ ಚಾಲನೆಯನ್ನು ನೀಡಿ ಕೆ.ವಿ.ಪ್ರಭಾಕರ್.
ಕಾಸರಗೋಡು: ಗಡಿನಾಡಿನ ಕನ್ನಡಿಗರು ಕನ್ನಡವನ್ನು ಅಭಿಮಾನದಿಂದ ಸ್ವೀಕರಿಸಿ, ಕೇರಳದ ನೆಲದಲ್ಲಿ ಕನ್ನಡದ ಕಂಪನ್ನು ಬೀರುವ ಕಾರ್ಯ ನಡೆಯುತ್ತಿದೆ. ಯಾವುದೇ ಆಸೆ ಆಮಿಷಗಳಿಲ್ಲದೆ ಕನ್ನಡದ ಪತ್ರಕರ್ತರು ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಕನ್ನಡದ ಕೆಲಸಗಳಿಗೆ ಕರ್ನಾಟಕ ರಾಜ್ಯವು ಯಾವತ್ತೂ ನಿಮ್ಮ ಜೊತೆಗಿರುತ್ತದೆ ಎಂಬ ಭರವಸೆಯಿದೆ ಎಂದು ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದರು.
Advt
ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರಕಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇವರ ಸಹಯೋಗದಲ್ಲಿ ಸೀತಾಂಗೋಳಿ ಅಲಯನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಇಂದು ಜರಗಿದ ದತ್ತಿನಿಧಿ ಪ್ರಶಸ್ತಿ ಪ್ರಧಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಗಡಿನಾಡಿನಲ್ಲಿ ಕನ್ನಡದ ಪತ್ರಿಕೆಗಳನ್ನು ಉಳಿಸುವ ಕಾರ್ಯವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಅವರಿಗೆ ನೆರವಾಗಬೇಕಾಗಿರುವುದು ಸರಕಾರದ ಕರ್ತವ್ಯ ಎಂದರು.
ಕೆ.ಯು.ಡಬ್ಲು.ಜೆ ಕರ್ನಾಟಕ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಕನ್ನಡವನ್ನು ಉಳಿಸುವತ್ತ ದಿಟ್ಟಹೆಜ್ಜೆಯನ್ನಿಟ್ಟು ಮುಂದುವರಿಯುತ್ತಿರುವ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಬೇಡಿಕೆಯನ್ನು ಈಡೇರಿಸುವಲ್ಲಿ ಮುತುವರ್ಜಿಯಿಂದ ಮುಂದುವರಿಯುತ್ತೇವೆ. ನಿಮ್ಮ ಬೇಡಿಕೆಗಳು ಈಡೇರುವ ಹಂತದಲ್ಲಿದೆ ಎಂಬ ಭರವಸೆಯ ಮಾತುಗಳನ್ನಾಡಿದರು.
ನ್ಯಾಯವಾದಿ ಎಂ.ಎಸ್.ಥೋಮಸ್ ಡಿಸೋಜ ಅವರ ಕೃತಿ ಸೀತಾಂಗೋಳಿಯ ಗತವೈಭವ ಹಾಗೂ ಕೆ.ರಾಮಚಂದ್ರ ಬಲ್ಲಾಳ್ ಸಂಪಾದಕತ್ವದ ಕೇರಳ ರಾಜ್ಯದ ಏಕೈಕ ಕನ್ನಡ ಕಲಿಕಾ ಮಾರ್ಗದರ್ಶಿ `ಜ್ಞಾನದೀವಿಗೆ' ಕೃತಿಗಳನ್ನು ಬಿಡುಗಡೆಗೊಳಿಸಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಮಾಜಿ ಶಾಸಕ ಸೋಮಣ್ಣ ಬೇವಿನಮರದ ಅವರು ಮಾತನಾಡಿ ಕಾಸರಗೋಡಿನ ಕನ್ನಡದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಹೆಮ್ಮೆಯೆನಿಸುತ್ತದೆ. ಕನ್ನಡ ಪರ ಉತ್ಸವಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಇಲ್ಲಿನ ಕನ್ನಡಿಗರ ಪರವಾಗಿ ನಾವಿದ್ದೇವೆ. ಗಡಿನಾಡಿನ ಅನೇಕರು ನೀಡಿದ ಮನವಿಗಳಿಗೆ ಸೂಕ್ತ ಅನುದಾನವನ್ನು ಕಲ್ಪಿಸುವಲ್ಲಿ ಸರಕಾರದ ಗಮನಸೆಳೆಯುತ್ತೇವೆ ಎಂದರು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರು ಮಾತನಾಡಿ ಕರ್ನಾಟಕದ ಹಲವಾರು ವಲಯಗಳಲ್ಲಿ ಮಿನುಗುತ್ತಿರುವ ನಕ್ಷತ್ರಗಳು ಇಂದು ಕಾಸರಗೋಡಿನ ಕನ್ನಡದ ನೆಲದಲ್ಲಿ ಜೊತೆಗೂಡಿದ್ದೇವೆ. ಗಡಿನಾಡಿನ ಶಾಲೆಗಳ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳಿಗೆ ಕರ್ನಾಟಕ ಸರಕಾರದ ಅನುದಾನವನ್ನು ಕಲ್ಪಿಸಬೇಕು. ಕನ್ನಡದಲ್ಲಿ ಕಲಿತ ಗಡಿನಾಡ ಮಕ್ಕಳಿಗೆ ಸಿಗಬೇಕಾದ ಎಲ್ಲಾಸೌಲಭ್ಯಗಳನ್ನು ನೀಡುವಲ್ಲಿ ಮನಮಾಡಬೇಕು ಎಂದರು. ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ವಲಯದ ಮುಂದಾಳುಗಳಾಗಿರುವ ಮಂಜುನಾಥ ಆಳ್ವ ಮಡ್ವ, ಪೃಥ್ವಿರಾಜ್ ಶೆಟ್ಟಿ ಕುಂಬ್ಳೆ, ಕುದುಕೋಳಿ ಹಸನ್ ಹವ್ವಾ ಉಪಸ್ಥಿತರಿದ್ದರು. ಗೌರವ ಅತಿಥಿಗಳಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಭಗತ ರಾಜ್ ನಿಜಾಮಕರ್, ಡಾ. ಸಂಜೀವಕುಮಾರ್ ಅತಿವಾಲೆ, ಶಿವರೆಡ್ಡಿ ಖ್ಯಾಡೆದ್, ಹಿರಿಯ ಪತ್ರಕರ್ತರು, ಸಾಹಿತಿಗಳು ಡಾ. ಸದಾನಂದ ಪೆರ್ಲ, ಶೋಕ ಮಾತಾ ದೇವಾಲಯ ಬೇಳ ಪ್ರಧಾನ ಧರ್ಮ ಗುರುಗಳು ಅತೀ ವಂ. ಸ್ವಾಮಿ ಫಾದರ್ ಸ್ಟ್ಯಾನಿ ಪಿರೇರಾ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಕಾಸರಗೋಡು ಸಾಮಾಜಿಕ ಧಾರ್ಮಿಕ ಮುಖಂಡ ಅರಿಬೈಲು ಗೋಪಾಲ್ ಶೆಟ್ಟಿ, ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯೆ ಜಮೀಲಾ ಸಿದ್ದೀಕ್ ದಂಡೆ ಗೋಳಿ, ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯ ಸುಕುಮಾರ ಕುದ್ರೆಪಾಡಿ, ಬದಿಯಡ್ಕ ಗ್ರಾಮ್ ಪಂಚಾಯಿತಿ ಸದಸ್ಯರು ಶಂಕರ ಡಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಧ್ಯಾಗೀತಾ ಬಾಯಾರು ಪ್ರಾರ್ಥನೆ ಹಾಡಿದರು. ಸ್ವಾಗತಸಮಿತಿ ಪ್ರಧಾನ ಸಂಚಾಲಕ ನ್ಯಾಯವಾದಿ ಎಂ.ಎಸ್.ಥೋಮಸ್ ಸ್ವಾಗತಿಸಿ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಪ್ರಧಾನ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ ವಂದಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ರವಿ ನಾಯ್ಕಾಪು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೇರಣಾ ಭಾಷಣಕಾರ ರಫೀಕ್ ಮಾಸ್ಟರ್ ಮಂಗಳೂರು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯೋಗನೃತ್ಯ, ನೃತ್ಯಗಳು, ತಿರುವಾದಿರ, ವಿಮಿಕ್ರಿ, ಗೀತಾ ಸಾಹಿತ್ಯ ಸಂಭ್ರಮ ಜರುಗಿತು. ಅಂತಾರಾಷ್ಟಿಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಕೊಡುಗೈ ದಾನಿ, ಸಮಾಜಸೇವಕ, ಧಾರ್ಮಿಕ ಹರಿಕಾರ ಕೆ.ಕೆ.ಶೆಟ್ಟಿ ಹಾಗೂ ಅಂತಾರಾಷ್ಟೀಯ ಖ್ಯಾತಿಯ ವಾಸ್ತುಶಿಲ್ಪಿ ರವೀಂದ್ರ ಕುಮಾರ್ ಬೆಂಗಳೂರು ಇವರಿಗೆ ಪೌರಸನ್ಮಾನ ನೀಡಿ ಗೌರವಿಸಲಾಯಿತು. ಧಾರಾಕಾರ ಸುರಿದ ಮಳೆಯ ನಡುವೆಯೂ ನಡೆದ ಆಕರ್ಷಕ ಶೋಭಾ ಯಾತ್ರೆಗೆ ಪುತ್ತಿಗೆ ಗ್ರಾಮಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಆಳ್ವ ಡಮರು ಬಾರಿಸುವ ಮೂಲಕ ಚಾಲನೆಯನ್ನು ನೀಡಿದರು. ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಈ ವೇಳೆ ಸಾಧಕರಾದ
ಚೇತನ ಬೆಳಗೆರೆ (ಅವ್ವಾ ಸೇವಾ ಟ್ರಸ್ಟ್ ಹುಬ್ಬಳ್ಳಿ ದತ್ತಿನಿದಿ ಪ್ರಶಸ್ತಿ), ಅಶೋಕ್ ಚಂದರಗಿ (ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ. ಸೋಮಶೇಖರ್ ನೀಡುವ ದತ್ತಿನಿದಿ ಪ್ರಶಸ್ತಿ), ಶ್ರೀ ವಿಶ್ವೇಶ್ವರ ಭಟ್ (ಬ್ರಹ್ಮೈಕ್ಯ ಎಡನೀರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ಮರಣಾರ್ಥ ಶ್ರೀ ಮಠವು ನೀಡುವ ದತ್ತಿನಿಧಿ ಪ್ರಶಸ್ತಿ), ಬಿ. ರವೀಂದ್ರ ಶೆಟ್ಟಿ(ಹವ್ವಾ ಹಸನ್ ಫೌಂಡೇಶನ್ ಕುದ್ಕೊಳಿ ಸಂಸ್ಥಾಪಕ ಅಬ್ದುಲ್ಲಾ ಮಾದು ಮೂಲೆ ನೀಡುವ ದತ್ತಿನಿಧಿ ಪ್ರಶಸ್ತಿ) ಜಿ. ಸುಬ್ರಾಯ ಭಟ್ ಅನಿವಾಸಿ ಉದ್ಯಮಿ ಕಲಾಪೋಷಕ ಜೋಸೆಫ್ ಮಾಥಿಯಾಸ್ ನೀಡುವ ದತ್ತಿನಿಧಿ ಪ್ರಶಸ್ತಿ), ಇಬ್ರಾಹಿಂ ಕೆ ವಿ ಆರ್ ಠ್ಯಾಗೋರ್ ಸ್ಮರಣಾರ್ಥ ಭಾಗ್ಯ ಠ್ಯಾಗೋರ್ ನೀಡುವ ದತ್ತಿ ನಿಧಿ ಪ್ರಶಸ್ತಿ) ವಾಲ್ಟರ್ ನಂದಳಿಕೆ (ಶತಾಯುಷಿ ಸ್ವಾತಂತ್ರ‍್ಯ ಹೋರಾಟಗಾರ ಮಾಜಿ ಸಚಿವ ಭೀಮಣ್ಣ ಖಂಡ್ರೆ ಇವರ ಹೆಸರಿನ ದತ್ತಿನಿದಿ ಪ್ರಾಯೋಜಕರು ದೀಪಕ್ ವಿ.ಕೆ), ಹೆಚ್ ಬಿ. ಮದನ್ ಗೌಡ(ಡಾ. ಸುಧಾಕರ್ ಶೆಟ್ಟಿ ಪುಣೆ, ಹಿರಿಯ ಮಕ್ಕಳ ತಜ್ಞ ನೀಡುವ ದತ್ತಿನಿಧಿ ಪ್ರಶಸ್ತಿ), ಮುಂಬಯಿ ಪತ್ರಕರ್ತ ನವೀನ್ ಕೆ. ಮೊಹಮ್ಮದ್ ಇಬ್ರಾಹಿಂ ಪಾರ ಸ್ಮರಣಾರ್ಥ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲ ನೀಡುವ ದತ್ತಿನಿಧಿ ಪ್ರಶಸ್ತಿ) ನಂದಕುಮಾರ್ ಹೆಗಡೆ(ಮೊಗರೊಡಿ ಗೋಪಾಲಕೃಷ್ಣ ಮೇಲಾಂಟ ಸ್ಮರಣಾರ್ಥ ಹರ್ಷ ಮೇಲಾಂಟ ನೀಡುವ ದತ್ತಿನಿಧಿ ಪ್ರಶಸ್ತಿ), ಹೆಚ್ ಟಿ. ಅನಿಲ್ ಮಡಿಕೇರಿ( ಉದ್ಯಮಿ ಸಮಾಜಸೇವಕ ಆಶ್ರಫ್ ಶಾ ಮಂತೂರು ನೀಡುವ ದತ್ತಿನಿಧಿ ಪ್ರಶಸ್ತಿ), ಸದಾನಂದ ಜೋಶಿ ಬೀದರ್(ನವಿಮುಂಬಯಿ ಧರ್ಮದರ್ಶಿಅಣ್ಣಿ ಸಿ.ಶೆಟ್ಟಿ ನೀಡುವ ದತ್ತಿನಿಧಿ ಪ್ರಶಸ್ತಿ), ದಿವಾಕರ ಬಿ. ಶೆಟ್ಟಿ ಕಾಪು(ಕೆ.ಯು ಡಬ್ಲ್ಯೂ ಜೆ. ರಾಜ್ಯ ಸಮಿತಿ ನೀಡುವ ದತ್ತಿನಿಧಿ ಪ್ರಶಸ್ತಿ) ಬಿ.ಪಿ. ಶೇಣಿ(ಕೆ.ಯು.ಡಬ್ಲ್ಯೂಜೆ ರಾಜ್ಯ ಸಮಿತಿ ನೀಡುವ ದತ್ತಿನಿಧಿ ಪ್ರಶಸ್ತಿ) ಇವರಿಗೆ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಯಿತು. ಬಳಿಕ ವಿವಿಧ ಸಾಂಸ್ಕೃತಿಕ ಕಲಾ ಪ್ರಕಾರಗಳು ನಡೆಯಿತು.






