ಕಾಸರಗೋಡಿನಲ್ಲಿ ಕಳ್ಳಿಗೆ ಮಹಾಬಲ ಭಂಡಾರಿ ಸಂಸ್ಮರಣೆ.
ಜನವರಿ 07, 2025
0
ಕಾಸರಗೋಡಿನಲ್ಲಿ ಕಳ್ಳಿಗೆ ಮಹಾಬಲ ಭಂಡಾರಿ ಸಂಸ್ಮರಣೆ.
ಕಾಸರಗೋಡು: ಕಳ್ಳಿಗೆ ಮಹಾಬಲ ಭಂಡಾರಿಯವರು ಕಾಸರಗೋಡಿನ ಕನ್ನಡ ಹೋರಾಟದ ಮುಂಚೂಣಿಯಲ್ಲಿದ್ದವರು. ಕನ್ನಡಿಗರ ಹಕ್ಕುಗಳ ಪ್ರತಿಪಾದನೆಗಾಗಿ ಅಹೋರಾತ್ರಿ ದುಡಿದವರು. ವಕೀಲರಾಗಿ ತಮ್ಮ ಪ್ರತಿಭೆಯಿಂದಲೇ ಅನೇಕ ದಾವೆಗಳನ್ನು ಗೆದ್ದವರು. ತಮ್ಮನ್ನು ಕೇವಲ ವಕೀಲ ವೃತ್ತಿಯಲ್ಲಿ ಮಾತ್ರವೇ ತೊಡಗಿಸಿಕೊಳ್ಳದೆ ಕನ್ನಡ ನಾಡು ನುಡಿಯ ಸಂರಕ್ಷಣೆಗಾಗಿ ಅರ್ಪಿಸಿಕೊಂಡವರು ಎಂದು ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕರವರು ನುಡಿದರು. ಅವರು ಕಾಸರಗೋಡು ನುಳ್ಳಿಪ್ಪಾಡಿ ಕನ್ನಡ ಭವನ ಗ್ರಂಥಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಮತ್ತು ಕಾಸರಗೋಡು ನುಳ್ಳಿಪ್ಪಾಡಿ ಕನ್ನಡ ಭವನ ಗ್ರಂಥಾಲಯದ ಸಹಯೋಗದಲ್ಲಿ ಇಂದು ಸಂಜೆ ನಡೆದ ಧೀಮಂತ ಕನ್ನಡ ಹೋರಾಟಗಾರ, ಮಾಜಿ ಶಾಸಕ, ಸಾಹಿತಿ, ಖ್ಯಾತ ನ್ಯಾಯವಾದಿ ದಿ. ಕಳ್ಳಿಗೆ ಮಹಾಬಲ ಭಂಡಾರಿಯವರ ಸಂಸ್ಮರಣ ಕಾರ್ಯಕ್ರಮದಲ್ಲಿ ಸಂಸ್ಮರಾಣಾ ಭಾಷಣ ಮಾಡುತ್ತಾ ನುಡಿದರು. ಕಳ್ಳಿಗೆಯವರು ಕಾಸರಗೋಡು ಕನ್ನಡದ ಧೀಮಂತ ಹೋರಾಟಗಾರರು, ನಾವು ಕನ್ನಡಕ್ಕೆ ಸಲ್ಲಿಸುವ ಸಣ್ಣ ಸೇವೆಯೂ ಕಳ್ಳಿಗೆಯವರಿಗೆ ಅರ್ಪಿಸುವ ಶ್ರದ್ಧಾಂಜಲಿ ಎಂದರು. ಸಾಹಿತಿ ಸುಕುಮಾರ ಅಲಂಪಾಡಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಭವನ ಗ್ರಂಥಾಲಯ ಅಧ್ಯಕ್ಷ ಕೆ. ವಾಮನ ರಾವ್ ಬೇಕಲ್, ಸಾಹಿತಿ ಸುಕುಮಾರ ಅಲಂಪಾಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಕಳ್ಳಿಗೆ ಮಹಾಬಲ ಭಂಡಾರಿಯವರ ಬಗ್ಗೆ ಗುಣಗಾನ ಮಾಡಿದರು. ಈ ವೇಳೆ ಕಾಸರಗೋಡಿನಲ್ಲಿ ಕನ್ನಡ ಭವನ ಸ್ಥಾಪಿಸಿ ಕನ್ನಡದ ಕೈಂಕರ್ಯ ನಡೆಸುತ್ತಿರುವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತ ಶ್ರೀ ವಾಮನ ರಾವ್ - ಸಂಧ್ಯಾ ರಾಣಿ ದಂಪತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ, ಫಲಪುಷ್ಪವನ್ನಿತ್ತು ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿ: ಶೇಖರ ಶೆಟ್ಟಿ ಬಾಯಾರು ಪ್ರಾರ್ಥನೆ ಹಾಡಿ, ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ: ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿ, ಗೌರವ ಕಾರ್ಯದರ್ಶಿ: ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.





