ಅಸೌಖ್ಯದಿಂದ ಬಳಲುತ್ತಿದ್ದ ವೃದ್ದೆಯ ಮೃತದೇಹ ಮನೆ ಮುಂಭಾಗದ ಬಾವಿಯಲ್ಲಿ ಪತ್ತೆ.
ಮಾರ್ಚ್ 29, 2025
0
ಅಸೌಖ್ಯದಿಂದ ಬಳಲುತ್ತಿದ್ದ ವೃದ್ದೆಯ ಮೃತದೇಹ ಮನೆ ಮುಂಭಾಗದ ಬಾವಿಯಲ್ಲಿ ಪತ್ತೆ.
ಮಂಜೇಶ್ವರ: ಅಸೌಖ್ಯದಿಂದ ಬಳಲುತ್ತಿದ್ದ ವೃದ್ದೆಯೋರ್ವರ ಮೃತದೇಹ ಮನೆ ಮುಂಭಾಗದ ಬಾವಿಯಲ್ಲಿ ಇಂದು ಮುಂಜಾನೆ ಪತ್ತೆಯಾಗಿದೆ. ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನ ಬಳಿಯ ನಿವಾಸಿ ಹೊಸಮನೆ ದಿ. ಜನಾರ್ಧನ ಆಚಾರ್ಯರ ಧರ್ಮಪತ್ನಿ ಶ್ರೀಮತಿ ಸುಗುಣ (77) ಮೃತಪಟ್ಟವರು. ಮೃತರು ಕಳೆದ ಕೆಲವು ಸಮಯಗಳಿಂದ ಅಸೌಖ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಪುತ್ರ ಪಾಂಡುರಂಗ ಆಚಾರ್ಯ ಮುಂಜಾನೆ 3 ಗಂಟೆ ವೇಳೆ ಎಚ್ಚರಿಕೆಯಾದಾಗ ಮನೆಯ ಮುಂಭಾಗದ ಬಾಗಿಲು ತೆರೆದಿತ್ತು. ಹೊರಗೆ ಬಂದು ನೋಡಿದಾಗ ತಾಯಿಯ ಊರುಗೋಲು ಬಾವಿಕಟ್ಟೆಯ ಬಳಿಯಿತ್ತು. ಬಾವಿಗೆ ಇಣುಕಿ ಪರೀಕ್ಷಿಸಿದಾಗ ಮೃತದೇಹ ತೇಲುತ್ತಿದ್ದು ಕೂಡಲೇ ಉಪ್ಪಳದ ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಲಾಯಿತು. ಕೂಡಲೇ ಆಗಮಿಸಿದ ಅಗ್ನಿ ಶಾಮಕದಳದವರು ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿ ಮಂಗಲ್ಪಾಡಿಯ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ. ಮಂಜೇಶ್ವರದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವ ಮಹಜರಿನ ಬಳಿಕ ಮೃತದೇಹವನ್ನು ಮನೆಗೆ ಇಂದು ಅಪರಾಹ್ನ 11.30 ಗಂಟೆಗೆ ತರಲಾಗುವುದು. ಬಳಿಕ ಹೊಸಂಗಡಿ ಬಳಿಯ ರಾಮತ್ತ ಮಜಾಲಿನ ಸಾರ್ವಜನಿಕ ರುದ್ರ ಭೂಮಿಯಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಮೃತಪಟ್ಟ ಸುಗುಣರವರು ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನದ ಶ್ರೀ ಕಾಳಿಕಾ ಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಮಕ್ಕಳಾದ: ಸೌಮಿನಿ, ಹೊಸಮನೆ ಪಾಂಡುರಂಗ ಆಚಾರ್ಯ, ಗೀತಾ, ಹೊಸಮನೆ ಹಿಮಕರ ಆಚಾರ್ಯ, ಪುಷ್ಪ, ಅಳಿಯಂದಿರಾದ: ಹೊಸಮನೆ ನಾಗೇಶ ಆಚಾರ್ಯ ಕೋಟೆಕ್ಕಾರು, ಜನಾರ್ಧನ ಆಚಾರ್ಯ ರಾಮತ್ತಮಜಾಲು, ರವಿಶಂಕರ ಆಚಾರ್ಯ ಮಂಗಳೂರು, ಸೊಸೆ: ಉಷಾ, ಸಹೋದರಿಯರಾದ: ಕಮಲಾಕ್ಷಿ ಉಡುಪಿ, ತಿಲೋತ್ತಮೆ ಪುತ್ತೂರು, ಶ್ರೀಮತಿ ಮುಂಬಯಿ, ಲಲಿತಾ ಕಾಸರಗೋಡು, ಶ್ರೀವಳ್ಳಿ ಪೆರ್ಲ, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಏಕ ಸಹೋದರ ಸೋಮನಾಥ ಆಚಾರ್ಯ ಕಾಸರಗೋಡು ಈ ಹಿಂದೆ ನಿಧನರಾಗಿದ್ದಾರೆ.

